Israel-Gaza Conflict: 4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌, ಕದನ ವಿರಾಮ 2 ದಿನ ವಿಸ್ತರಣೆ

ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೆರುಸಲೇಂ: ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್‌ ಬಂಡುಕೋರರು ಬಿಡುಗಡೆ ಮಾಡಿದ್ದಾರೆ.

ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್‌ಕ್ರಾಸ್‌ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ದೃಢಪಡಿಸಿದೆ. ಕದನ ವಿರಾಮ ಘೋಷಣೆಯ 4ನೇ ದಿನವಾದ ಸೋಮವಾರ ಈ ಪ್ರಕ್ರಿಯೆ ನಡೆದಿದೆ.

'ಒಪ್ಪಂದದಂತೆ ನಿನ್ನೆ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಕೂಡ 33 ಮಂದಿ ಪ್ಯಾಲೆಸ್ಟೀನಿ ಕೈದಿಗಳನ್ನು ಬಿಡುಗಡೆ ಮಾಡಿದೆ' ಎಂದು ಕತಾರ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ಅವರು ಹೇಳಿದ್ದಾರೆ.

2 ದಿನ ಕದನ ವಿರಾಮ ವಿಸ್ತರಣೆ
ಈ ನಡುವೆ ಇಸ್ರೇಲ್ ಕದನದಲ್ಲಿ ಮತ್ತೆರಡು ದಿನಗಳ ಯುದ್ಧ ವಿರಾಮವನ್ನು ಘೋಷಣೆ ಮಾಡಲಾಗಿದೆ. ಈ ಮೊದಲಿನ ಒಪ್ಪಂದಂತೆ 4 ದಿನಗಳ ಕದನ ವಿರಾಮ ಸೋಮವಾರಕ್ಕೆ ಅಂತ್ಯವಾಗಬೇಕಿತ್ತು. ಆದರೆ, ಮಾನವೀಯತೆಯ ದೃಷ್ಟಿಯಿಂದ 2 ದಿನ ವಿಸ್ತರಣೆ ಮಾಡಲಾಗಿದೆ.

ಈ ವೇಳೆ ಮತ್ತಷ್ಟು ಒತ್ತೆಯಾಳುಗಳನ್ನು ಉಭಯ ಬಣಗಳು ವಿನಿಮಯ ಮಾಡಿಕೊಳ್ಳಲಿವೆ. ಕದನ ವಿರಾಮದ 3ನೇ ದಿನ ಹಮಾಸ್ 17 ಜನರನ್ನು, ಇಸ್ರೇಲ್ 39 ಜನರನ್ನು ಬಿಡುಗಡೆ ಮಾಡಿದೆ. 2ನೇ ದಿನ ಹಮಾಸ್ 20 ಇಸ್ರೇಲಿಗರು, ಇಸ್ರೇಲ್ 39 ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಮಾಡಿದ್ದವು. ಮೂರನೇ ದಿನ 39 ಕೈದಿಗಳನ್ನು ಹಾಗೂ ಹಮಾಸ್ 24 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದವು.

ಇಸ್ರೇಲ್ ಮತ್ತು ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಶುಕ್ರವಾರ (ನವೆಂಬರ್ 24) ರಂದು ಪ್ರಾರಂಭವಾಯಿತು. ಇದರಂತೆ ಹಮಾಸ್ ಹಾಗೂ ಇಸ್ರೇಲ್‌ ನಡುವಿನ ಒಪ್ಪಂದದನ್ವಯ 3 ಹಾಗೂ 1ರ ಅನುಪಾತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಹಂತ, ಹಂತವಾಗಿ ಹಮಾಸ್‌ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್​ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್​ಗಳಿಂದ ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಗಾಜಾದಲ್ಲಿ ದಾಳಿ ಆರಂಭಿಸಿತ್ತು. ಹಮಾಸ್​ನ್ನು ಹತ್ತಿಕ್ಕುವವರೆಗೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಹೇಳಿತ್ತು. ಅಷ್ಟೇ ಅಲ್ಲದೆ, ಯುದ್ಧವನ್ನು ನಾವು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮಿಂದಲೇ ಆಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com