ಇಸ್ರೇಲ್-ಪ್ಯಾಲೇಸ್ತೀನ್ ಯುದ್ಧ: 500ಕ್ಕೂ ಅಧಿಕ ಮಂದಿ ಸಾವು, ಮನೆ ತೊರೆಯುತ್ತಿರುವ ಜನ, ಹಮಾಸ್ ದಾಳಿಗೆ ಇರಾನ್ ಬೆಂಬಲ

ಇಸ್ರೇಲ್(Israel) ಹಾಗೂ ಪ್ಯಾಲೆಸ್ತೀನ್ (Palestine)ನ ಉಗ್ರಗಾಮಿ ಗುಂಪು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವು ಪಡೆಯುತ್ತಿದ್ದು, ಈ ವರೆಗೂ ಈ ಯುದ್ಧದಲ್ಲಿ ಕನಿಷ್ಠ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.
ಇಸ್ರೇಲ್-ಹಮಾಸ್ ಬಂಡುಕೋರರ ಯುದ್ಧ
ಇಸ್ರೇಲ್-ಹಮಾಸ್ ಬಂಡುಕೋರರ ಯುದ್ಧ
Updated on

ಟೆಲ್ ಅವೀವ್: ಇಸ್ರೇಲ್(Israel) ಹಾಗೂ ಪ್ಯಾಲೆಸ್ತೀನ್ (Palestine)ನ ಉಗ್ರಗಾಮಿ ಗುಂಪು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧವು ಅತ್ಯಂತ ವಿನಾಶಕಾರಿ ತಿರುವು ಪಡೆಯುತ್ತಿದ್ದು, ಈ ವರೆಗೂ ಈ ಯುದ್ಧದಲ್ಲಿ ಕನಿಷ್ಠ 500ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ, ಈ ಯುದ್ಧದಲ್ಲಿ ಇದುವರೆಗೆ ಇಸ್ರೇಲ್ ವೊಂದರಲ್ಲಿ ಕನಿಷ್ಠ 300ಕ್ಕೂ ಅಧಿಕ ಇಸ್ರೇಲಿಯನ್ನರು ಸಾವನ್ನಪ್ಪಿದ್ದು, 1750 ಇಸ್ರೇಲಿ ಜನರು ಗಾಯಗೊಂಡಿದ್ದಾರೆ. ಅತ್ತ ಇಸ್ರೇಲ್ ನಡೆಸಿದ ಪ್ರತಿದಾಳಿಯಲ್ಲಿ ಪ್ಯಾಲೇಸ್ತೀನ್ ನಲ್ಲಿ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್ ಹಿಂದೆಂದೂ ಕಂಡಿರದ ಐತಿಹಾಸಿಕ ದುರಂತವನ್ನು ಕಂಡಿದೆ. ಪ್ಯಾಲೆಸ್ತೀನ್​ನ ಭಯೋತ್ಪಾದಕ ಸಂಘಟನೆ ಹಮಾಸ್ ಕೇವಲ 20 ನಿಮಿಷಗಳಲ್ಲಿ ಇಸ್ರೇಲ್ ಮೇಲೆ 5 ಸಾವಿರ ರಾಕೆಟ್​ಗಳನ್ನು ಹಾರಿಸಿತು. 

ಕಳೆದ 24 ಗಂಟೆಗಳಲ್ಲಿ ಈ ಸಂರ್ಷದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚಾಗತೊಡಗಿದೆ. ಪ್ರತೀಕಾರದ ದಾಳಿಯಲ್ಲಿ ಇದುವರೆಗೆ 300 ಮಂದಿ ಸಾವನ್ನಪ್ಪಿದ್ದಾರೆ, ಗಾಜಾದಲ್ಲಿ 230 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಹಮಾಸ್ ಹಲವು ಇಸ್ರೇಲಿ ಸೈನಿಕರು ಹಾಗೂ ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿರಿಸಿಕೊಂಡಿತ್ತು. ಹಮಾಸ್ ದಾಳಿ ಬಳಿಕ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವಿನ ಸಂಘರ್ಷ ರಾತ್ರಿಯಿಡೀ ಮುಂದುವರೆದಿತ್ತು. ಎರಡು ಕಡೆಯಿಂದ ದಾಳಿಗಳುಮುಂದುವರೆದವು. ದಕ್ಷಿಣ ಇಸ್ರೇಲ್​ನ ಕೆಲವು ಭಾಗಗಳಲ್ಲಿ ಸೇನೆಯು ಹಮಾಸ್​ನೊಂದಿಗೆ ಇನ್ನೂ ಹೋರಾಟದಲ್ಲಿ ತೊಡಗಿದೆ. ದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿಲ್ಲ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ.

ಇಸ್ರೇಲ್​ನಲ್ಲಿ ಶಾಲೆಗಳನ್ನು ಮುಚ್ಚುವಂತೆ ಆದೇಶ 
ಇಸ್ರೇಲ್​ನಲ್ಲಿ ಭಾನುವಾರ ಶಾಲೆಗಳಿಗೆ ರಜೆ ಇರುವುದಿಲ್ಲ. ಆದರೆ ಹಮಾಸ್ ಉಗ್ರರ ದಾಳಿ ಹಿನ್ನಲೆಯಲ್ಲಿ ಮೊದಲ ಬಾರಿಗೆ ಈ ಭಾನುವಾರ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಆದೇಶಿಸಿದೆ.

ಮನೆ ತೊರೆಯುತ್ತಿರುವ ಜನ
ಅತ್ತ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧ ತೀವ್ರಗೊಳ್ಳುತ್ತಲೇ ಸಂಘರ್ಷ ಪೀಡಿತ ಪ್ರದೇಶಗಳಲ್ಲಿನ ಜನ ಪ್ರಾಣ ಉಳಿಸಿಕೊಳ್ಳಲು ತಮ್ಮ ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳೂ ಕೂಡ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದು, ಮನೆಗಳಿಂದ ಹೊರಗೆ ಬಾರದಂತೆ ಎಚ್ಚರಿಸಿದ್ದಾರೆ.

ಇಸ್ರೇಲ್ ಮೇಲಿನ ಹಮಾಸ್ ದಾಳಿಗೆ ಇರಾನ್ ಬೆಂಬಲ
ಇದೇ ವೇಳೆ ಹಮಾಸ್ ಉಗ್ರಗ್ರಾಮಿ ಸಂಘಟನೆ ನಡೆಸಿದ ದಾಳಿಗೆ ಇಸ್ರೇಲ್​ನ ಶತ್ರು ರಾಷ್ಟ್ರ ಇರಾನ್ ಸಂಭ್ರಮಿಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ನಿಕಟವಾಗಿರುವ ಹಿರಿಯ ಸಲಹೆಗಾರರು  ಇರಾನ್ ಸಂಸತ್ತಿನಲ್ಲಿ ದಾಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದು ಅದ್ಭುತ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ. ಈ ಸಂದರ್ಭದಲ್ಲಿ, ಇರಾನ್ ಸಂಸತ್ತಿನಲ್ಲಿ ಇಸ್ರೇಲ್‌ಗೆ ಮರಣದ ಘೋಷಣೆಗಳು ಮೊಳಗಿದವು.

ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಂಸತ್ತಿನಲ್ಲಿ ಜನರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇರಾನ್ ಇಸ್ರೇಲ್ ಅನ್ನು ತನ್ನ ದೊಡ್ಡ ಶತ್ರು ಎಂದು ಪರಿಗಣಿಸುತ್ತದೆ, ಇರಾನ್‌ನ ವಿದೇಶಾಂಗ ಸಚಿವಾಲಯವು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಬೆಂಬಲಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com