ಇಸ್ರೇಲ್-ಹಮಾಸ್ ಯುದ್ಧ: ಇಸ್ರೇಲ್'ಗೆ ನಾಳೆ ಅಮೆರಿಕಾ ಅಧ್ಯಕ್ಷ ಬೈಡನ್ ಭೇಟಿ

ಯುದ್ಧಪೀಡಿತ ಇಸ್ರೇಲ್ ರಾಷ್ಟ್ರಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಬುಧವಾರ (ಅಕ್ಟೋಬರ್ 18) ಭೇಟಿ ನೀಡುತ್ತಿದ್ದು, ಭೇಟಿ ವೇಳೆ ಅಲ್ಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಅಮೆರಿಕಾ ಅಧ್ಯಕ್ಷ ಜೋ ಬೈಡನ್ಯ
ಅಮೆರಿಕಾ ಅಧ್ಯಕ್ಷ ಜೋ ಬೈಡನ್ಯ

ವಾಷಿಂಗ್ಟನ್‌: ಯುದ್ಧಪೀಡಿತ ಇಸ್ರೇಲ್ ರಾಷ್ಟ್ರಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಬುಧವಾರ (ಅಕ್ಟೋಬರ್ 18) ಭೇಟಿ ನೀಡುತ್ತಿದ್ದು, ಭೇಟಿ ವೇಳೆ ಅಲ್ಲಿನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

ಈ ಭೇಟಿ ಮೂಲಕ ಇಸ್ರೇಲ್‌ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಹೊಂದಿದೆ ಎಂಬುದನ್ನು ಸಮರ್ಥಿಸಲಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಮಂಗಳವಾರ ತಿಳಿಸಿದ್ದಾರೆ.

ನೆತನ್ಯಾಹು ಅವರೊಂದಿಗೆ ನಡೆಸುವ ಸುದೀರ್ಘ ಮಾತುಕತೆ ಬಳಿಕ, ಬೈಡನ್‌ ಅವರು ಇಸ್ರೇಲ್‌ನೊಂದಿಗಿನ ಒಗ್ಗಟ್ಟನ್ನು ಪುನರುಚ್ಛರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ನಡುವೆ ಗಾಜಾದಲ್ಲಿನ ಹಮಾಸ್‌ ಬಂಡುಕೋರರ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್‌, ಮತ್ತಷ್ಟು ದಾಳಿ ನಡೆಸಲು ಸಿದ್ಧತೆಗಳ ನಡೆಸುತ್ತಿದೆ.

ಹಮಾಸ್‌ ಬಂಡುಕೋರ ಸಂಘಟನೆ ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ವಾಯುದಾಳಿ ಆರಂಭಿಸಿದ ಒಂದು ವಾರದಲ್ಲಿ ಗಾಜಾ ಪಟ್ಟಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ನೆಲೆ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇಸ್ರೇಲ್‌ ಸರ್ಕಾರವು ಹಮಾಸ್ ಸಂಘಟನೆಯ ವಿರುದ್ಧ ಅಕ್ಟೋಬರ್ 8ರಂದು ಯುದ್ಧ ಘೋಷಣೆ ಮಾಡಿದೆ. ಆ ನಂತರದಲ್ಲಿ ಇಸ್ರೇಲ್ ಸೇನೆಯು ಹಮಾಸ್ ದಾಳಿಯ ರೂವಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಈ ವೇಳೆ 2,300ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಪ್ಯಾಲೆಸ್ಟೀನ್‌ನ ಜನಸಾಮಾನ್ಯರೇ ಹೆಚ್ಚು. ಹಮಾಸ್‌ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಈ ಸಂಘರ್ಷದಿಂದಾಗಿ ಗಾಜಾದಲ್ಲಿ ನಿರಾಶ್ರಿತರಾಗಿರುವವರಿಗೆ ಅರಬ್‌ ರಾಷ್ಟ್ರಗಳು ಪ್ರವೇಶ ನಿರಾಕರಿಸಿವೆ ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿರುವ ನಿಕ್ಕಿ ಹ್ಯಾಲೆ ಕಿಡಿಕಾರಿದ್ದಾರೆ.

ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಹಮಾಸ್‌ಗೆ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com