ಭಾರತ-ಕೆನಡಾ ರಾಜತಾಂತ್ರಿಕ ಸಮಸ್ಯೆ: ‘ವಾಕ್ ಸ್ವಾತಂತ್ರ್ಯ’ದ ಬಗ್ಗೆ ಇತರರಿಂದ ಕಲಿಯಬೇಕಾಗಿಲ್ಲ: ಜೈಶಂಕರ್

ವಾಕ್ ಸ್ವಾತಂತ್ರ್ಯದ ಬಗ್ಗೆ ನಾವು ಇತರರಿಂದ ಕಲಿಯಬೇಕಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಹೇಳಿದ್ದಾರೆ,
ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್

ನವದೆಹಲಿ: ವಾಕ್ ಸ್ವಾತಂತ್ರ್ಯದ ಬಗ್ಗೆ ನಾವು ಇತರರಿಂದ ಕಲಿಯಬೇಕಾಗಿಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಶನಿವಾರ ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಮಸ್ಯೆ ಕುರಿತು ಮಾತನಾಡಿರುವ ಅವರು, ಈ ವಿಷಯದ ಬಗ್ಗೆ ಭಾರತದ ನಿಲುವನ್ನು ಪುನರುಚ್ಚರಿಸಿದರು.

ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಕಡೆಗೆ ಕೆನಡಾದ ಅನುಮತಿಯು ಒಂದು ಸಮಸ್ಯೆಯಾಗಿದೆ ಎಂದು ಹೇಳಿದರು.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ವಾಕ್ ಸ್ವಾತಂತ್ರ್ಯದ ಬಗ್ಗೆ ನಾವು ಇತರಿಂದ ಕಲಿಯಬೇಕಾಗಿಲ್ಲ. ವಾಕ್ ಸ್ವಾತಂತ್ರ್ಯವು ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ತಿಳಿಸಿದರು.

ಕೆನಡಾದೊಂದಿಗಿನ ಪ್ರಸ್ತುತ ಉದ್ವಿಗ್ನತೆಯನ್ನು ಸ್ಟ್ಯಾಂಡ್‌ಆಫ್ ಎಂದು ಕರೆಯಲಾಗುವುದಿಲ್ಲ. ಅಲ್ಲಿ ವಿಜೃಂಭಿಸುತ್ತಿರುವ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಬಗ್ಗೆ ಕೆನಡಾ ಸರ್ಕಾರದ ಸಹನೆಯೇ ಕಾರಣ. ಈ ಬಾರಿ ಕೆನಡಾ ಇಂತಹ ಆರೋಪ ಮಾಡಿರುವುದರಿಂದ ನಾನು ಡೆಡ್‌ಲಾಕ್ ಎಂದು ಕರೆಯಬೇಕೇ ಅಥವಾ ಬೇಡವೇ ಎಂದು ನನಗೆ ತಿಳಿದಿಲ್ಲ.

ಇದು ಭಾರತ ಸರ್ಕಾರದ ನೀತಿ ಅಲ್ಲ ಎಂದು ನಾವು ಅವರಿಗೆ ಹೇಳಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರವು ನಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಂಡರೆ ಅದನ್ನು ಪರಿಗಣಿಸಲು ಸಿದ್ಧರಿದ್ದೇವೆ. ಕೆನಡಾದಲ್ಲಿ ನಡೆಯುತ್ತಿರುವ ಸಮಸ್ಯೆಗೆ ಕೆನಡಾ ಸರ್ಕಾರದ ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸಾಚಾರದ ಸಹಿಷ್ಣುತೆಯೇ ಕಾರಣ ಎಂದರು.

ಕೆನಡಾದ ಪ್ರಸ್ತುತ ಪರಿಸ್ಥಿತಿಯನ್ನು ಸಾಮಾನ್ಯ ಎಂದು ಕರೆಯಲಾಗುವುದಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ಕಾನ್ಸುಲೇಟ್ ಎದುರು ಹಿಂಸಾಚಾರ ನಡೆಯುತ್ತಿದೆ. ನಮ್ಮ ಜನರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಜೊತೆಗೆ ನಮ್ಮ ರಾಜತಾಂತ್ರಿಕರನ್ನು ಬೆದರಿಸಲಾಗುತ್ತಿದೆ. ಇದು ಸ್ವೀಕಾರಾರ್ಹ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.

ಪಂಜಾಬ್‌ನ ಜಲಂಧರ್‌ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್, ಕೆನಡಾ ದೇಶಕ್ಕೆ ಪರಾರಿಯಾಗಿದ್ದನು. ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತ, ಕೆನಡಾದಲ್ಲಿ ವಲಸೆ ಹೋಗಿ ಖಲಿಸ್ತಾನ್‌ ಉಗ್ರರ ನಾಯಕನಾಗಿದ್ದ. ಕೆನಡಾ ದೇಶದ ಸರ್ರೆ ಎನ್ನುವ ಪ್ರದೇಶದಲ್ಲಿರುವ ಗುರುದ್ವಾರದ ಹೊರಗೆ 2023ರ ಜುಲೈ 18 ರಂದು ಅಪರಿಚಿತ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.

ಈ ನಡುವೆ ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಯ ಗುಂಪಿನ ಮುಖಂಡ ಹರ್ದೀಪ್‌ ಸಿಂಗ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಕೆನಡಾ ಸಂಸತ್‌ನಲ್ಲೇ ಗಂಭೀರ ಆರೋಪ ಮಾಡಿದ್ದರು. ಆ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಈ ಬೆಳವಣಿಗೆ ಬಳಿಕ ಭಾರತ-ಕೆನಡಾ ನಡುವೆ ಶೀತಲ ಸಮರ ಆರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com