ರಷ್ಯಾ-ಉಕ್ರೇನ್ ಯುದ್ಧ: ಮತ್ತಷ್ಟು ಮಾನವೀಯ ನೆರವು ಕೋರಿ ಪ್ರಧಾನಿ ಮೋದಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಪತ್ರ
ರಷ್ಯಾ- ಉಕ್ರೇನ್ ಕದನದಲ್ಲಿ ಮಧ್ಯಪ್ರವೇಶ ಮಾಡುವಂತೆ ಹಾಗೂ ಯುದ್ಧದಿಂದ ತತ್ತರಿಸಿರುವ ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡುವಂತೆ ಕೋರಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Published: 12th April 2023 02:12 PM | Last Updated: 12th April 2023 03:50 PM | A+A A-

ಪ್ರಧಾನಿ ಮೋದಿ-ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ನವದೆಹಲಿ: ರಷ್ಯಾ- ಉಕ್ರೇನ್ ಕದನದಲ್ಲಿ ಮಧ್ಯಪ್ರವೇಶ ಮಾಡುವಂತೆ ಹಾಗೂ ಯುದ್ಧದಿಂದ ತತ್ತರಿಸಿರುವ ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡುವಂತೆ ಕೋರಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಉಕ್ರೇನ್ ಉಪ ವಿದೇಶಾಂಗ ಸಚಿವೆ ಎಮಿನೆ ಜಪರೊವಾ ಅವರು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಖಾತೆ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಈ ಪತ್ರವನ್ನು ಹಸ್ತಾಂತರಿಸಿದ್ದಾರೆ. ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಈ ಇಬ್ಬರು ನಾಯಕಿಯರು ಅಭಿಪ್ರಾಯಗಳನ್ನು ಹಂಚಿಕೊಂಡರು. ಉಕ್ರೇನ್‌ಗೆ ಹೆಚ್ಚುವರಿ ಮಾನವೀಯ ನೆರವು ನೀಡುವ ಭರವಸೆಯನ್ನು ಕೊಡಲಾಗಿದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದರೆ, ಈ ಭೇಟಿ 'ಫಲಪ್ರದವಾಗಿದೆ' ಎಂದು ಜಪರೊವಾ ಹೇಳಿದ್ದಾರೆ.
ಇದನ್ನೂ ಓದಿ: ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ಸ್ಥಾಪನೆಗೆ ರಷ್ಯಾ ಯೋಜನೆ!
ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನಿ ಝಪರೋವಾ ಅವರು ಭಾರತದಲ್ಲಿ ಇರುವ ಸಮಯದಲ್ಲಿ ಅವರು ಈ ಪತ್ರವನ್ನು ಬರೆದಿದ್ದಾರೆ. ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಹೆಚ್ಚುವರಿ ಮೂಲಭೂತ ಅಗತ್ಯಗಳನ್ನು ಪೂರೈಸುವಂತೆ ಉಕ್ರೇನ್ ವಿನಂತಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಈಗಾಗಲೇ ಬರೋಬ್ಬರಿ 1 ವರ್ಷ ಕಳೆದಿದೆ. ಕೆಲವೇ ವಾರದಲ್ಲಿ ಯುದ್ಧ ಮುಗಿಯಲಿದೆ ಎಂಬ ವಿಶ್ವಾಸದಲ್ಲಿದ್ದ ಜಗತ್ತಿಗೆ ಇದು ಬೇಸರ ತರಿಸಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಹೆಚ್ಚಾದಷ್ಟು ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಯುದ್ಧಕ್ಕೆ ಅಂತ್ಯ ಹಾಡಲು ಭಾರತವೂ ಸೇರಿದಂತೆ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಬಳಿ ಉಕ್ರೇನ್ ಮನವಿ ಮಾಡುತ್ತಿದೆ.
ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಕ್ರೇನ್ ಅಧ್ಯಕ್ಷರಿಗೆ ಅವಕಾಶ ನೀಡಲು ಮನವಿ
ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಅವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಬಗ್ಗೆ ಭಾರತ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಔಷಧ ಹಾಗೂ ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ಹೆಚ್ಚುವರಿ ಮಾನವೀಯ ಸಹಾಯಕ್ಕಾಗಿ ಉಕ್ರೇನ್ ಮನವಿ ಮಾಡಿದೆ. ಉಕ್ರೇನ್‌ನಲ್ಲಿ ಓದುತ್ತಿದ್ದ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ತಾವು ನೆಲೆಸಿರುವ ದೇಶದಲ್ಲಿಯೇ ಯುನಿಫೈಡ್ ಸ್ಟೇಟ್ ಕ್ವಾಲಿಫಿಕೇಷನ್ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಉಕ್ರೇನ್ ಸಚಿವರು ತಿಳಿಸಿದ್ದಾರೆ. ಇದರಿಂದಾಗಿ ಉಕ್ರೇನ್‌ನಲ್ಲಿ ಯುದ್ಧ ಆರಂಭವಾದ ನಂತರ ಭಾರತಕ್ಕೆ ಮರಳಿ ಬಂದಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಕೊಂಚ ನೆಮ್ಮದಿ ದೊರಕಿದೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷದ ನಡುವೆ ಭಾರತಕ್ಕೆ ತೈಲ ರಫ್ತು 22 ಪಟ್ಟು ಏರಿಕೆ: ರಷ್ಯಾ
ದೇಶದಲ್ಲಿ ಮೂಲಸೌಕರ್ಯಗಳನ್ನು ಮರು ನಿರ್ಮಿಸುವುದು ಭಾರತದ ಕಂಪೆನಿಗಳಿಗೆ ಹೊಸ ಅವಕಾಶ ಕಲ್ಪಿಸಲಿದೆ ಎಂದಿರುವ ಉಕ್ರೇನ್, ರಷ್ಯಾ ಜತೆಗಿನ ಯುದ್ಧವನ್ನು ನಿಲ್ಲಿಸುವುದರಲ್ಲಿ ಸಹಾಯ ಮಾಡಲು ಭಾರತ ಮತ್ತಷ್ಟು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಹಿರಿಯ ಅಧಿಕಾರಿಗಳು ಉಕ್ರೇನ್‌ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದೆ.
ಭಾರತದ ಜೊತೆ ಪಯಣಿಸುವುದು ಉಕ್ರೇನ್‌ಗೆ ಬಹುಮುಖ್ಯವಾದ ಸಂಗತಿ: ಉಕ್ರೇನ್ ಸಚಿವೆ
ಭಾರತ ಹಾಗೂ ಉಕ್ರೇನ್ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಎಮಿನಿ ಝಪರೋವಾ, ಭಾರತದ ಜೊತೆ ಪಯಣಿಸುವುದು ಉಕ್ರೇನ್‌ಗೆ ಬಹುಮುಖ್ಯವಾದ ಸಂಗತಿ ಎಂದು ಹೇಳಿದ್ದು, ಭಾರತವು ಇತರೆ ದೇಶಗಳ ಜತೆಗೆ ಹೊಂದಿರುವ ಆರ್ಥಿಕ ಸಂಬಂಧಗಳ ಕುರಿತು ಸೂಚನೆ ನೀಡುವ ಸ್ಥಾನದಲ್ಲಿ ಉಕ್ರೇನ್ ಇಲ್ಲ ಎಂದು ರಷ್ಯಾ ಜತೆಗಿನ ಭಾರತದ ತೈಲ ಒಪ್ಪಂದಗಳ ಕುರಿತು ಉಕ್ರೇನ್ ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧ: ಪುಟಿನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಅಂತಾರಾಷ್ಟ್ರೀಯ ಕೋರ್ಟ್
ಭಾರತವನ್ನು ಜಾಗತಿಕ ನಾಯಕ ಮತ್ತು 'ವಿಶ್ವಗುರು' ಎಂದು ಬಣ್ಣಿಸಿರುವ ಅವರು, ಜಾಗತಿಕ ಸವಾಲುಗಳನ್ನು ಪರಿಹರಿಸುವ ಪಾತ್ರವನ್ನು ಭಾರತ ವಹಿಸಿಕೊಳ್ಳಬಲ್ಲದು ಎಂದು ಹೇಳಿದ್ದಾರೆ. "ನನ್ನ ಪ್ರಕಾರ ಭಾರತ ಜಾಗತಿಕ ನಾಯಕ. ಇದು ನಿಜಕ್ಕೂ ಜಗತ್ತಿನ 'ವಿಶ್ವಗುರು'. ವಾಸ್ತವವಾಗಿ ಮೌಲ್ಯಗಳಿಗಾಗಿ ಹೋರಾಡುವ ನೋವನ್ನು ನಾವು ಅನುಭವಿಸುತ್ತಿದ್ದೇವೆ. ಇದು ನ್ಯಾಯದ ಕುರಿತಾದ ಸಂಗತಿ... ನನ್ನ ದೇಶದ ಅಸ್ತಿತ್ವವನ್ನೇ ರಷ್ಯಾ ಪ್ರಶ್ನಿಸುತ್ತಿದೆ. ನಮ್ಮ 1,500 ವರ್ಷಗಳ ಇತಿಹಾಸದಲ್ಲಿ ಉಕ್ರೇನ್ ಯಾವ ದೇಶದ ಮೇಲೆಯೂ ದಾಳಿ ನಡೆಸಿಲ್ಲ" ಎಂದು ಅವರು ತಿಳಿಸಿದ್ದಾರೆ.
ಎಮಿನೆ ಅವರು ಕಳೆದ ವರ್ಷದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ ಬಳಿಕ ಭಾರತಕ್ಕೆ ಭೇಟಿ ನೀಡಿರುವ ಮೊದಲ ಉಕ್ರೇನ್ ಅಧಿಕಾರಿ ಎನಿಸಿದ್ದಾರೆ.