ಹೊಸ ನಕ್ಷೆ ಸಮರ್ಥಿಸಿಕೊಂಡ ಚೀನಾ: 'ಅತಿರೇಕದ ವ್ಯಾಖ್ಯಾನ ಬೇಡ' ಎಂದು ಭಾರತಕ್ಕೆ ಸಲಹೆ
ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶ ತನ್ನ ಭೂಭಾಗ ಎಂದು ತೋರಿಸುವ ಹೊಸ ನಕ್ಷೆ ಬಿಡುಗಡೆ ಮಾಡಿದ ತನ್ನ ಕ್ರಮವನ್ನು ಚೀನಾ ಬುಧವಾರ ಸಮರ್ಥಿಸಿಕೊಂಡಿದೆ.
Published: 30th August 2023 10:21 PM | Last Updated: 31st August 2023 04:45 PM | A+A A-

ಸಾಂದರ್ಭಿಕ ಚಿತ್ರ
ಬೀಜಿಂಗ್: ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶ ತನ್ನ ಭೂಭಾಗ ಎಂದು ತೋರಿಸುವ ಹೊಸ ನಕ್ಷೆ ಬಿಡುಗಡೆ ಮಾಡಿದ ತನ್ನ ಕ್ರಮವನ್ನು ಚೀನಾ ಬುಧವಾರ ಸಮರ್ಥಿಸಿಕೊಂಡಿದೆ.
ಭಾರತದ ಭೂಪ್ರದೇಶದ ಮೇಲೆ ಹಕ್ಕು ಸಾಧಿಸುವ ಚೀನಾದ 2023 ಸ್ಟ್ಯಾಂಡರ್ಡ್ ಮ್ಯಾಪ್ ಅನ್ನು ಸಮರ್ಥಿಸಿಕೊಂಡಿರುವ ಚೀನಾ, ಇದು ತನ್ನ ಕಾನೂನಿಗೆ ಅನುಸಾರವಾಗಿ ಕೈಗೊಂಡಿರುವ ರೂಢಿಗತ ಕ್ರಮವಾಗಿದೆ ಎಂದು ಹೇಳಿದೆ.
ಈ ವಿಚಾರವಾಗಿ ಭಾರತ ವಸ್ತುನಿಷ್ಠವಾಗಿ ಮತ್ತು ಶಾಂತಚಿತ್ತದಿಂದ ವರ್ತಿಸಬೇಕು. ಈ ಕುರಿತು ಅತಿರೇಕದ ವ್ಯಾಖ್ಯಾನವನ್ನು ಕೈಬಿಡಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆಬ್ ಬಿನ್ ಅವರು ಹೇಳಿದ್ದಾರೆ.
ಇದನ್ನು ಓದಿ: ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಸೇರಿಸಿ ಹೊಸ ನಕ್ಷೆ ಬಿಡುಗಡೆ; ಚೀನಾ ನಡೆ ಖಂಡಿಸಿದ ಭಾರತ
ಚೀನಾದ 2023ರ ಸ್ಟ್ಯಾಂಡರ್ಡ್ ಮ್ಯಾಪ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಭಾರತ, ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ(MEA) ವಕ್ತಾರ ಅರಿಂದಮ್ ಬಾಗ್ಚಿ ಅವರು ಮಂಗಳವಾರ ಹೇಳಿದ್ದರು.
ಚೀನಾ ಇಂತಹ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. ನಾವು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇವೆ ಎಂದು ಅರಿಂದಮ್ ಬಾಗ್ಚಿ ಅವರು ಟ್ವೀಟ್ ಮಾಡಿದ್ದರು.