ಸೇಂಟ್ ಪೀಟರ್ಸ್‌ಬರ್ಗ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರದ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಣಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ವರದಿಯಾಗಿದೆ.
ರಷ್ಯಾದ ಪೂರ್ವ ಮಿಲಿಟರಿ ವಲಯದ ಹಣಕಾಸು ಮುಖ್ಯಸ್ಥೆ 54 ವರ್ಷದ ಮರಿನಾ ಯಾಕಿನಾ ಸೇಂಟ್ ಪೀಟರ್ಸ್‌ಬರ್ಗ್‌ನ ಜಮಾಶೈನ್ ಹೋಟೆಲ್ ಒಂದರ ಕೋಣೆಯ ಕಿಟಕಿಯಿಂದ ರಸ್ತೆಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸೇಂಟ್‌ಪೀಟರ್ಸ್‌ಬರ್ಗ್ ಪೊಲೀಸರು, ‘ಮರಿನಾ ಯಾಕಿನಾ ಹೋಟೆಲ್‌ನ 16 ನೇ ಮಹಡಿಯ 160 ಅಡಿಯಿಂದ ಬಿದ್ದು ಮೃತಪಟ್ಟಿದ್ದು. ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಆತ್ಮಹತ್ಯೆಯೋ-ಕೊಲೆಯೋ?
ಮರೀನಾ ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆತ್ಮಹತ್ಯೆಯೋ-ಕೊಲೆಯೋ? ಎಂಬ ಅನುಮಾನ ಮೂಡುವಂತೆ ಮಾಡಿದೆ. ರಷ್ಯಾ ಉಕ್ರೇನ್‌ನ ಆಕ್ರಮಣ ಮಾಡುವುದಕ್ಕೆ ಏನೇನು ಹಣಕಾಸು ವ್ಯವಹಾರ ಮಾಡಿದೆ? ಎಂಬುದಕ್ಕೆ ಮರಿನಾ ಪ್ರಮುಖ ಸಾಕ್ಷ್ಯವಾಗಿದ್ದರು ಎನ್ನಲಾಗಿದೆ. ಅಂತೆಯೇ ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಮರಿನಾ ಮಾಜಿ ಪತಿ, ‘ಮರಿನಾ ಯಾಕಿನಾ ತಂಗಿದ್ದ ಹೋಟೆಲ್‌ನಿಂದ ತನಗೆ ಕರೆ ಬಂದಿತ್ತು. ನಾನು ಒಂದು ವಿಷಯ ತಿಳಿಸಲು ಪೊಲೀಸರ ಬಳಿ ಹೋಗಬೇಕಿದೆ ಎಂದು ಹೇಳಿದ್ದಳು. ಆದರೆ, ಅದಾದ 10 ನಿಮಿಷದ ಬಳಿಕ ಆಕೆ ಸಾವಿನ ಸುದ್ದಿ ಬಂತು’ ಎಂದು ಹೇಳಿದ್ದಾರೆ.
3ನೇ ನಿಗೂಢ ಸಾವು
ರಷ್ಯಾ– ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾದ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾದ ಹಲವರು ಇತ್ತೀಚೆಗೆ ನಿಗೂಢವಾಗಿ ಮೃತಪಟ್ಟವರ ಗುಂಪಿಗೆ ಮರಿನಾ ಸೇರಿದ್ದಾರೆ. ಇದೇ ರೀತಿ ರಷ್ಯಾದ ವಿರೋಧ ಪಕ್ಷದ ಸಂಸದ ಪಾವೆಲ್ ಆ್ಯಂಥವ್ ಹಾಗೂ ವಕೀಲ ವಾಡ್ಲಿಮಿರ್ ಬಿದೆವೊ ಅವರು ಒಡಿಶಾದ ರಾಯಗಢದ ಹೋಟೆಲ್‌ವೊಂದರ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಅಸಹಜ ಸಾವು ಪ್ರಕರಣ ದಾಖಲಾಗಿತ್ತು.
Advertisement