ಕೀವ್: ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿರುವಂತೆಯೇ ಉಕ್ರೇನ್ ಸೇನಾಪಡೆಗಳ ಬೆಂಬಲಕ್ಕೆ ನಿಂತಿರುವ ಅಮೆರಿಕ ಸೇನೆ ತನ್ನ ಸುಧಾರಿತ 31 ಅಬ್ರಮ್ಸ್ ಟ್ಯಾಂಕರ್ ಗಳನ್ನು ಕೀವ್ ಗೆ ರವಾನೆ ಮಾಡಲು ನಿರ್ಧರಿಸಿದೆ.
ಹೌದು.. ರಷ್ಯಾ – ಉಕ್ರೇನ್ ನಡುವಿನ ಕದನದಲ್ಲಿ, ಉಕ್ರೇನ್‌ಗೆ ಶಸ್ತ್ರಾಸ್ತ್ರ ಬೆಂಬಲ ನೀಡುವುದಾಗಿ ಜರ್ಮನಿ, ಫ್ರಾನ್ಸ್ ಹಾಗೂ ಬ್ರಿಟನ್ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ, ಅಮೆರಿಕ ಕೂಡ ತಾನು ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುವುದಾಗಿ ಹೇಳಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಕುರಿತು ಮಾಹಿತಿ ನೀಡಿದ್ದು, 31 ಸುಧಾರಿತ ‘ಅಬ್ರಾಮ್ಸ್‘ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್‌ಗೆ ಕಳುಹಿಸಿಕೊಡುವುದಾಗಿ ಘೋಷಣೆ ಮಾಡಿದ್ದಾರೆ.
‘ಅಮೆರಿಕವು ಉಕ್ರೇನ್‌ಗೆ 31 ಅಬ್ರಾಮ್ಸ್ ಯುದ್ಧ ಟ್ಯಾಂಕರ್‌ಗಳನ್ನು ಕಳುಹಿಸಿಕೊಡಲಿದೆ ಎನ್ನುವುದನ್ನು ನಾನು ಇಂದು ಘೋಷಣೆ ಮಾಡುತ್ತಿದ್ದೇನೆ. ಇದು ಒಂದು ಉಕ್ರೇನ್ ಬೆಟಾಲಿಯನ್‌ಗೆ ಸಮ. ತನ್ನ ಪ್ರದೇಶವನ್ನು ರಕ್ಷಿಸಲು ಮತ್ತು ಅದರ ಕಾರ್ಯತಂತ್ರದ ಉದ್ದೇಶಗಳನ್ನು ಸಾಧಿಸಲು ಉಕ್ರೇನ್‌ಗೆ ಇದು ನೆರವಾಗಲಿದೆ ಎಂದು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಅವರು ಶಿಫಾರಸು ಮಾಡಿದ್ದರಿಂದ ಈ ನಿರ್ಧಾರ ಮಾಡಲಾಗಿದೆ‘ ಎಂದು ಬೈಡೆನ್ ಹೇಳಿದ್ದಾರೆ.
‘ಇದು ವಿಶ್ವದಲ್ಲೇ ಸುಧಾರಿತ ಟ್ಯಾಂಕ್‌ಗಳಾಗಿದ್ದು, ಇದರ ನಿರ್ವಹಣೆ ಹಾಗೂ ಕಾರ್ಯನಿರ್ವಹಣೆ ಅತ್ಯಂತ ಕ್ಲಿಷ್ಟಕರವಾಗಿದೆ. ಇದರ ನಿರ್ವಹಣೆ ಬಗ್ಗೆಯೂ ನಾವು ತರಬೇತಿ ನೀಡಲಿದ್ದೇವೆ. ಇದರ ಜತೆಗೆ M88 ಸಹಾಯಕ ವಾಹನಗಳನ್ನೂ ಕಳುಹಿಸಲಾಗುವುದು‘ ಎಂದು ಅವರು ಘೋಷಣೆ ಮಾಡಿದ್ದಾರೆ.
Advertisement