ಕ್ಲಾಸಿಫೈಡ್ ದಾಖಲೆಗಳ ಪ್ರಕರಣ: ಟ್ರಂಪ್ ವಿರುದ್ಧ ದೋಷಾರೋಪ; ನಾನು 'ಅಮಾಯಕ' ಎಂದ ಅಮೆರಿಕಾ ಮಾಜಿ ಅಧ್ಯಕ್ಷ
ಅಧಿಕಾರದಿಂದ ನಿರ್ಗಮಿಸಿದ ಬಳಿಕ ಬಹಳ ಸೂಕ್ಷ್ಮವಾದ ದಾಖಲೆಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ
Published: 10th June 2023 09:15 AM | Last Updated: 10th June 2023 01:54 PM | A+A A-

ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರ್ಗೀಕೃತ ಸರ್ಕಾರಿ ದಾಖಲೆಗಳನ್ನು ಮರಳಿಸದೇ ಹೋಗಿದ್ದು ಹಾಗೂ ಶ್ವೇತ ಭವನ ತೊರೆದ ಬಳಿಕವೂ ತಮ್ಮ ದಾಖಲೆಗಳನ್ನು ಫ್ಲೋರಿಡಾದ ನಿವಾಸದಲ್ಲೇ ಉಳಿಸಿಕೊಳ್ಳುವ ಮೂಲಕ ಕಾನೂನಿನ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡಿದ ಆರೋಪದ ಮೇಲೆ ಫೆಡರಲ್ ಗ್ರ‍್ಯಾಂಡ್ ಜ್ಯೂರಿ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಿದೆ.
ಅಧಿಕಾರದಿಂದ ನಿರ್ಗಮಿಸಿದ ಬಳಿಕ ಬಹಳ ಸೂಕ್ಷ್ಮವಾದ ದಾಖಲೆಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಹೊರಿಸಲಾಗಿದೆ. ಅಮೆರಿಕದ ಇತಿಹಾಸದಲ್ಲಿ ಹೀಗೆ ದೋಷಾರೋಪಣೆಗೆ ಗುರಿಯಾದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಪಾತ್ರರಾಗಿದ್ದಾರೆ. ಇದರಿಂದ ಅಮೆರಿಕ ಸಾರ್ವತ್ರಿಕ ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿಯೇ ಟ್ರಂಪ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಶ್ವೇತಭವನದಿಂದ ನಿರ್ಗಮಿಸಿದ ನಂತರ ತಮ್ಮ ಫ್ಲೋರಿಡಾ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಟ್ರಂಪ್, ಸರ್ಕಾರದ ಕೆಲವು ರಹಸ್ಯ ಹಾಗೂ ಸೂಕ್ಷ್ಮ ದಾಖಲೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು ಹಾಗೂ ಸರ್ಕಾರದ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದರು ಎಂಬ ಆರೋಪದಲ್ಲಿ ಫೆಡರಲ್ ಗ್ರ್ಯಾಂಡ್ ನ್ಯಾಯಾಧೀಶರು ಅವರ ವಿರುದ್ಧ ದೋಷಾರೋಪಣೆ ನಿಗದಿಪಡಿಸಿದ್ದಾರೆ.
ಇದನ್ನೂ ಓದಿ: ಡೋನಾಲ್ಡ್ ಟ್ರಂಪ್ ಬಂಧನ: ಕೋರ್ಟ್ ಗೆ ಹಾಜರು, ವಿಚಾರಣೆ ವೇಳೆ ತಾನು ನಿರಪರಾಧಿ ಎಂದ ಮಾಜಿ ಅಧ್ಯಕ್ಷ!
ರಹಸ್ಯ ಹಾಗೂ ಸೂಕ್ಷ್ಮ ಕಡತಗಳನ್ನು ಅನಧಿಕೃತವಾಗಿ ತಮ್ಮ ಬಳಿ ಇರಿಸಿಕೊಂಡಿದ್ದು, ಸುಳ್ಳು ಹೇಳಿಕೆ ನೀಡಿದ್ದು ಮತ್ತು ಅಡಚಣೆಯ ಸಂಚು ಸೇರಿದಂತೆ ಹಲವು ಪ್ರಕರಣಗಳನ್ನು 76 ವರ್ಷದ ಟ್ರಂಪ್ ವಿರುದ್ಧ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಇದು ಟ್ರಂಪ್ ವಿರುದ್ಧದ ಎರಡನೇ ದೋಷಾರೋಪಣೆಯಾಗಿದ್ದರೆ, ಮೊದಲ ಫೆಡರಲ್ ದೋಷಾರೋಪವಾಗಿದೆ. ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಟ್ರಂಪ್ ಹವಣಿಸುತ್ತಿದ್ದಾರೆ. ಆದರೆ ಅಮೆರಿಕ ನ್ಯಾಯಾಂಗ ಇಲಾಖೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣವು ಟ್ರಂಪ್ ಅವರಿಗೆ ಮತ್ತೊಂದು ಹಿನ್ನಡೆ ಉಂಟುಮಾಡಿದೆ.
ಈ ಕ್ರಿಮಿನಲ್ ಪ್ರಕರಣವನ್ನು ಅಮೆರಿಕದ ಕಾನೂನು ವಿಭಾಗವೇ ಹೊರತಂದಿರುವುದರಿಂದ ಟ್ರಂಪ್ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್‌ಗೆ ವರ್ಗೀಕೃತ ಕಡತಗಳ ಪ್ರಕರಣ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಅಧ್ಯಕ್ಷೀಯ ಚುನಾವಣೆ: ದೋಷಾರೋಪಣೆಗೆ ಗುರಿಯಾಗಿದ್ದರೂ 24 ಗಂಟೆಗಳಲ್ಲಿ 4 ಮಿಲಿಯನ್ ಡಾಲರ್ ಸಂಗ್ರಹಿಸಿದ ಟ್ರಂಪ್
ಟ್ರಂಪ್ ವಿರುದ್ಧ ಏಳು ಫೆಡರಲ್ ಆರೋಪಗಳನ್ನು ಹೊರಿಸಲಾಗಿದೆ. ಎನ್‌ಡಿಐ (ಬೇಹುಗಾರಿಕೆ ಕಾಯ್ದೆ) ಕಡತಗಳನ್ನು ತಮ್ಮ ಸ್ವಾಧೀನದಲ್ಲಿ ಇರಿಸಿಕೊಂಡಿರುವುದು, ನ್ಯಾಯದಾನಕ್ಕೆ ಅಡ್ಡಿಪಡಿಸುವ ಸಂಚು, ದಾಖಲೆ ಅಥವಾ ಕಡತವನ್ನು ತಡೆಹಿಡಿದಿರುವುದು, ದಾಖಲೆ ಅಥವಾ ಪ್ರಮಾಣಪತ್ರವನ್ನು ಅಕ್ರಮವಾಗಿ ಬಚ್ಚಿಡುವುದು, ಫೆಡರಲ್ ತನಿಖೆಯಲ್ಲಿನ ದಾಖಲೆಯನ್ನು ಅಡಗಿಸಿಡುವುದು, ಸುಳ್ಳು ಹೇಳಿಕೆಗಳು ಮತ್ತು ಪ್ರತಿನಿಧಿತ್ವ, ರಹಸ್ಯವಾಗಿಡುವ ಯೋಜನೆ ಈ ಆರೋಪಗಳಾಗಿವೆ.
ಇದು ಅಮೆರಿಕಾದ ಇತಿಹಾಸದಲ್ಲಿಯೇ ಕಪ್ಪು ದಿನ. ಮಾಜಿ ಅಧ್ಯಕ್ಷರೊಬ್ಬರಿಗೆ ಈ ರೀತಿ ಸಮನ್ಸ್ ನೀಡುತ್ತಿರುವುದು ಇತಿಹಾಸದಲ್ಲಿಯೇ ಮೊದಲು. ಭ್ರಷ್ಟ ಬೈಡನ್ ಆಡಳಿತ ನನ್ನ ವಿರುದ್ದ ಹಗೆತನ ಸಾಧಿಸುತ್ತಿದೆ. ಎಲ್ಲಾ ಅಧ್ಯಕ್ಷರಿಗಿಂತ ಅತೀ ಹೆಚ್ಚು ಮತ ಪಡೆದ, ಈಗಲೂ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಮುನ್ನಡೆಯಲ್ಲಿದ್ದೇನೆ. ನಾನು ಅಮಾಯಕ, ಇದೆಲ್ಲವನ್ನೂ ಎದುರಿಸುತ್ತೇನೆ. ಅಮೆರಿಕಾ ಸಂಕಷ್ಟದಲ್ಲಿದೆ. ನಾವೆಲ್ಲರೂ ಸೇರಿ ಅಮೆರಿಕಾವನ್ನು ಗಟ್ಟಿಗೊಳಿಸೋಣ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.