ಕಷ್ಟಕಾಲದಲ್ಲಿ ನೆರವಾದ 'ದೋಸ್ತ್' ಬೆನ್ನಿಗೆ ಇರಿದ ಟರ್ಕಿ?: ಒಐಸಿ ನಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪ!
ನವದೆಹಲಿ: ಭೀಕರ ಭೂಕಂಪನದಿಂದಾಗಿ ತತ್ತರಿಸಿ ಹೋಗಿರುವ ಟರ್ಕಿಗೆ ಕೆಟ್ಟಮೇಲೂ ಬುದ್ದಿ ಬಂದಂತೆ ಕಾಣುತ್ತಿಲ್ಲ.. ಕಷ್ಟಕಾಲದಲ್ಲಿ ನೆರವಾಗಿದ್ದ ಭಾರತದ ವಿರುದ್ಧವೇ ಮತ್ತೆ ಟರ್ಕಿ ಪಿತೂರಿ ಮುಂದುವರೆದಿದೆ.
ಹೌದು.. ಎದುರಾಳಿ ರಾಷ್ಟ್ರವಾದರೂ ಭೀಕರ ಭೂಕಂಪನದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಟರ್ಕಿಗೆ ಭಾರತ ಸರ್ಕಾರ 'ಆಪರೇಷನ್ ದೋಸ್ತ್' ಹೆಸರಿನಲ್ಲಿ ನೆರವಿನ ಮಹಾಪೂರವನ್ನೇ ಹರಿಸಿತ್ತು. ಭಾರತದ ಎನ್ ಡಿಆರ್ ಎಫ್ ತಂಡಗಳನ್ನು ಭೂಕಂಪನ ಪೀಡಿತ ಟರ್ಕಿಗೆ ರವಾನಿಸಿ ಅಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಾವಿರಾರು ಟರ್ಕಿ ನಾಗರೀಕರ ರಕ್ಷಣೆ ಮಾಡಿತ್ತು.
ಅಗತ್ಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳ ಜೊತೆಗೆ ತರಬೇತಿ ಪಡೆದ ಶ್ವಾನ ತಂಡವನ್ನು ಕಳುಹಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು. ಟರ್ಕಿ ಸರ್ಕಾರ ಕೂಡ ಭಾರತ ನೆರವನ್ನು ಅಂದು ಮುಕ್ತಕಂಠದಿಂದ ಶ್ಲಾಘಿಸಿತ್ತು. ಆದರೆ ಇದರ ಬೆನ್ನಲ್ಲೇ ಮತ್ತೆ ಟರ್ಕಿ ಭಾರತದ ಬೆನ್ನಿಗೆ ಇರಿಯುವ ಕೆಲಸ ಮಾಡಿದ್ದು, ಭಾರತದ ವಿರೋಧದ ನಡುವೆಯೇ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ (ಒಐಸಿ)ನಲ್ಲಿ ಭಾರತದ ಆಂತರಿಕ ವಿಚಾರವಾದ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ.
ಮಾತ್ರವಲ್ಲದೇ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (UNHRC) ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸುವ ಮೂಲಕ ಟರ್ಕಿ ತನ್ನ 'ದೋಸ್ತ್'ಗೆ ದ್ರೋಹ ವೆಸಗಿದೆ. ಅಷ್ಟೇ ಅಲ್ಲ, ಆ ದೇಶವು ಭಾರತವನ್ನು ತರಾಟೆಗೆ ತೆಗೆದುಕೊಂಡಿದ್ದು, ಪಾಕಿಸ್ತಾನದ ಬೆನ್ನಿಗೆ ನಿಂತಿದೆ. ಭಾರತದಿಂದ ಭಾರಿ ನೆರವು ಪಡೆದ ವಾರದ ನಂತರದಲ್ಲಿಯೇ ಟರ್ಕಿ ಭಾರತದ ವಿರುದ್ಧ ಹೇಳಿಕೆ ನೀಡಿದೆ.
ಜಿನೀವಾದಲ್ಲಿ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್ನಲ್ಲಿ ಟರ್ಕಿಯು, ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪ್ರಸ್ತಾಪಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ