ಢಾಕಾ: ಬಾಂಗ್ಲಾದೇಶದಲ್ಲಿ ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ಭಾರತಕ್ಕೆ ಬಂದಿಳಿದ ಬಳಿಕ ದೇಶಾದ್ಯಂತ ನಡೆದ ದಂಗೆಯಲ್ಲಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರು ಮತ್ತು ಅವರ ಕುಟುಂಬದ ಸದಸ್ಯರ 29 ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ.
ಹಸೀನಾ ಅವರು ದೇಶ ತೊರೆದ ಬಳಿಕ ಅವಾಮಿ ಲೀಗ್ ನಾಯಕರಿಗೆ ಸೇರಿದ ಮನೆ ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಪ್ರತಿಭಟನಕಾರರು ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಬಳಿಕ ಅಲ್ಲಿರುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ಕ್ಯುಮಿಲ್ಲಾದಲ್ಲಿ ಜನಸಮೂಹ ನಡೆಸಿದ ದಾಳಿಯಲ್ಲಿ ಕನಿಷ್ಠ 11 ಜನರು ಸಾವಿಗೀಡಾಗಿದ್ದಾರೆ. ಮಾಜಿ ಕೌನ್ಸಿಲರ್ ಮೊಹಮ್ಮದ್ ಶಾ ಆಲಂ ಅವರ ಮೂರು ಅಂತಸ್ತಿನ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಆರು ಮಂದಿ ಮೃತಪಟ್ಟಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಸೋಮವಾರ ಗುಂಪೊಂದು ಶಾ ಆಲಂ ಅವರ ಮನೆಯ ಮೇಲೆ ದಾಳಿ ಮಾಡಿದರು. ಈ ವೇಳೆ ರಕ್ಷಣೆಗೆಂದು ಕೆಲವರು ಮನೆಯ ಮೂರನೇ ಮಹಡಿಗೆ ಏರಿದರು. ದುಷ್ಕರ್ಮಿಗಳು ಮನೆಯ ನೆಲ ಮಹಡಿಗೆ ಬೆಂಕಿ ಹಚ್ಚಿದ ಪರಿಣಾಮ ಮೂರನೇ ಮಹಡಿಯಲ್ಲಿ ಆಶ್ರಯ ಪಡೆದಿದ್ದವರು ದಟ್ಟ ಹೊಗೆಯಿಂದಾಗಿ ಸಾವಿಗೀಡಾದ ಘಟನೆ ನಡೆದಿದೆ. ಈ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಬಾಂಗ್ಲಾ ಸಂಸದ ಶಫೀಕುಲ್ ಇಸ್ಲಾಂ ಶಿಮುಲ್ ಅವರ ಮನೆಗೆ ಗುಂಪೊಂದು ಮಂಗಳವಾರ ಬೆಂಕಿ ಹಚ್ಚಿದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದಾರೆ. ಶವಗಳು ಕೊಠಡಿಗಳು, ಬಾಲ್ಕನಿಗಳು ಮತ್ತು ಛಾವಣಿಗಳಲ್ಲಿ ಪತ್ತೆಯಾಗಿವೆ. ಅವಾಮಿ ಲೀಗ್‌ನ ಯುವ ವಿಭಾಗವಾದ ಜುಬೊ ಲೀಗ್‌ನ ಇಬ್ಬರು ನಾಯಕರ ಶವಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ. ಅವರಲ್ಲಿ ಜುಬಾ ಲೀಗ್ ನಾಯಕ ಮುಶ್ಫಿಕರ್ ರಹೀಮ್ ಅವರ ದೇಹವು ಸೋನಾಗಾಜಿ ಉಪಜಿಲಾದ ಸೇತುವೆಯ ಕೆಳಗೆ ಪತ್ತೆಯಾಗಿದೆ ಎಂದು ದಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
ಬೋಗ್ರಾದಲ್ಲಿ ಜನಸಮೂಹವೊಂದು ಜೂಬೋ ಲೀಗ್‌ನ ಇಬ್ಬರು ನಾಯಕರನ್ನು ಕೊಂದಿದೆ. ಸೋಮವಾರ ಲಾಲ್ಮೋನಿರ್ಹತ್‌ನಲ್ಲಿ ಜನಸಮೂಹ ಹಚ್ಚಿದ ಬೆಂಕಿಗೆ ಜಿಲ್ಲಾ ಅವಾಮಿ ಲೀಗ್ ಜಂಟಿ ಪ್ರಧಾನ ಕಾರ್ಯದರ್ಶಿ ಸುಮನ್ ಖಾನ್ ಅವರ ಮನೆಯಲ್ಲಿ ಆರು ಶವಗಳನ್ನು ಸ್ಥಳೀಯರು ಪತ್ತೆ ಮಾಡಿದ್ದಾರೆ.
Advertisement