
ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಯಭೇರಿ ಭಾರಿಸಿ ವಿಶ್ವಕಪ್ ಗೆದ್ದಿರುವ ಭಾರತ ತಂಡವನ್ನು ಸಂಭ್ರಮಾಚರಣೆಗೆ ಆಗಮಿಸುವಂತೆ ಮಾಲ್ಡೀವ್ಸ್ ಆಹ್ವಾನಿಸಿದೆ.
ಮಾಲ್ಡೀವ್ಸ್ ಪ್ರವಾಸೋಧ್ಯಮ ಇಲಾಖೆ ಭಾರತ ಕ್ರಿಕೆಟ್ ತಂಡಕ್ಕೆ ಈ ಆಹ್ವಾನ ನೀಡಿದ್ದು, 'ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಮತ್ತು ಅವರ ವಿಜಯದ ಸಂತೋಷದಲ್ಲಿ ಪಾಲ್ಗೊಳ್ಳಲು ಮಾಲ್ಡೀವ್ಸ್‌ಗೆ ಅಪಾರ ಗೌರವವಾಗಿದೆ ಎಂದು ಹೇಳಿದೆ.
ಜೂನ್ 29 ರಂದು ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್‌ಗಳಿಂದ ಸೋಲಿಸಿದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಬಾರ್ಬಡೋಸ್‌ನಲ್ಲಿ ಟಿ20 ಟ್ರೋಫಿಯನ್ನು ಗೆದ್ದುಕೊಂಡಿತು.
ಇದರ ಬೆನ್ನಲ್ಲೇ "ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಷನ್ಸ್ ಕಾರ್ಪೊರೇಷನ್ (MMPRC) ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ (MATI) ಸಹಯೋಗದೊಂದಿಗೆ ಜಂಟಿಯಾಗಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ವಿಶೇಷ ಮತ್ತು ಮುಕ್ತ ಆಹ್ವಾನವನ್ನು ನೀಡಿದ್ದೇವೆ ಎಂದು ಎರಡು ಸಂಸ್ಥೆಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಎಂಎಂಪಿಆರ್‌ಸಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಶಿಯುರಿ ಮತ್ತು MATIಯ ಪ್ರಧಾನ ಕಾರ್ಯದರ್ಶಿ ಅಹ್ಮದ್ ನಜೀರ್ ಅವರು ಕಳೆದ ವಾರ ಗುರುವಾರ ಭಾರತಕ್ಕೆ ಮರಳಿದ ತಂಡವನ್ನು ಆತಿಥ್ಯ ವಹಿಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಈ ಹಿಂದೆ ಭಾರತೀಯ ಸೇನೆ ವಿರುದ್ಧ ಕಿಡಿಕಾರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಸರ್ಕಾರ ಭಾರತ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿತ್ತು. ಗೋ ಬ್ಯಾಕ್ ಇಂಡಿಯಾ ಅಭಿಯಾನದ ಮೂಲಕ ಭಾರತವನ್ನು ಎದುರುಹಾಕಿಕೊಂಡಿತ್ತು. ಮಾಲ್ಡೀವ್ಸ್ ರಾಜಕಾರಣಿಗಳು ಭಾರತದ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದರ ಬೆನ್ನಲ್ಲೇ ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿತ್ತು. ಮಾಲ್ಡೀವ್ಸ್ ಪ್ರವಾಸೋಧ್ಯಮದ ಪ್ರಮುಖ ಗ್ರಾಹಕರಾಗಿದ್ದ ಭಾರತೀಯರ ಪ್ರವಾಸಿಗರ ಸಂಖ್ಯೆ ಶೇ.46ರಷ್ಟು ಕುಸಿತಗೊಂಡು ಮಾಲ್ಡೀವ್ಸ್ ಆದಾಯಕ್ಕೆ ಕೊಡಲಿಪೆಟ್ಟು ಬಿದ್ದಿತು. ಇದರ ಬೆನ್ನಲ್ಲೇ ಅಧ್ಯಕ್ಷ ಮುಯಿಝು ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಹಳಿ ತಪ್ಪಿರುವ ಮಾಲ್ಡೀವ್ಸ್ ಪ್ರವಾಸೋಧ್ಯಮದವನ್ನು ಮತ್ತೆ ಹಳೆಯ ಟ್ರ್ಯಾಕ್ ಗೆ ತರಲು ಅಲ್ಲಿನ ಸರ್ಕಾರ ಹೆಣಗಾಡುತ್ತಿದೆ. ಅಲ್ಲದೆ ಭಾರತೀಯ ಮನವೊಲಿಕೆಗೆ ಹರಸಾಹಸ ಪಡುತ್ತಿದೆ.
Advertisement