
ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ 22 ವರ್ಷದ ಎಂಟೆಕ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಬಂಧನಕ್ಕೊಳಗಾಗಿರುವ ಇಬ್ಬರೂ ಸಹೋದರರಾಗಿದ್ದು, ಹರಿಯಾಣ ಮೂಲದವರಾಗಿದ್ದಾರೆಂದು ವರದಿಗಳು ತಿಳಿಸಿವೆ.
ಎರಡು ದಿನಗಳ ಹಿಂದೆ ಮೆಲ್ಬೋರ್ನ್‌ನ ಒರ್ಮಂಡ್‌ನಲ್ಲಿ ನವಜೀತ್ ಸಂಧು ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಎನ್‌ಎಸ್‌ಡಬ್ಲ್ಯೂ ಪೊಲೀಸರ ನೆರವಿನೊಂದಿಗೆ ನ್ಯೂ ಸೌತ್ ವೇಲ್ಸ್‌ನ ಗೌಲ್ಬರ್ನ್‌ನಲ್ಲಿರುವ ಅಭಿಜೀತ್ (26) ಮತ್ತು ರಾಬಿನ್ ಗಾರ್ಟನ್‌ನನ್ನು (27) ಬಂಧಿಸಲಾಗಿದೆ ಎಂದು ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿ ಮತ್ತು ಆರೋಪಿಗಳು ಹರಿಯಾಣದ ಕರ್ನಾಲ್ ನಿವಾಸಿಗಳಾಗಿದ್ದು. ಸಹೋದರರಿಬ್ಬರ ನಡುವೆ ಬಾಡಿಗೆಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಜಗಳ ನಿಲ್ಲಿಸಲು ಮಧ್ಯಪ್ರವೇಶ ಮಾಡಿದ ಸಂದರ್ಭದಲ್ಲಿ ನವಜೀತ್ ಸಂಧುಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಘಟನೆಯಲ್ಲಿ ನವಜೀತ್ ಅವರ 30 ವರ್ಷದ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಮೃತ ವಿದ್ಯಾರ್ಥಿಯ ಚಿಕ್ಕಪ್ಪ ಯಶ್ವೀರ್ ತಿಳಿಸಿದ್ದಾರೆ.
ನವಜೀತ್‌ನ ಬಳಿ ಕಾರು ಇತ್ತು, ಅವನ ಸ್ನೇಹಿತನ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಕೊಂಡೊಯ್ಯಲು ಕಾರಿನಲ್ಲಿ ಸ್ನೇಹಿತನೊಂದಿಗೆ ಆತ ವಾಸವಿದ್ದ ಮನೆಯ ಕಡೆ ಹೋಗಿದ್ದ. ಸ್ನೇಹಿತ ಒಳಗೆ ಹೋದಾಗ, ನವಜೀತ್‌ಗೆ ಕೂಗಾಟ ಕೇಳಿಬಂದಿದೆ. ಗಲಾಟೆ ನೋಡಿ ಜಗಳ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭದಲ್ಲಿ ನವಜೀತ್ ಎದೆಗೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿಯಲಾಗಿದೆ ಎಂದು ಯಶ್ವಿರ್ ಹೇಳಿದ್ದಾರೆ.
Advertisement