Indonesia: ಜ್ವಾಲಾಮುಖಿ ಸ್ಫೋಟ; ಕನಿಷ್ಟ 9 ಸಾವು, ಇಡೀ ಅರಣ್ಯ ಸುಟ್ಟು ಕರಕಲು!
ಜಕಾರ್ತ: ಇಂಡೋನೇಷ್ಯಾದಲ್ಲಿ ಮತ್ತೊಂದು ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಪರಿಣಾಮ 9 ಮಂದಿ ಸಾವಿಗೀಡಾಗಿ ಒಂದಿಡೀ ಅರಣ್ಯ ಪ್ರದೇಶ ಸುಟ್ಟುಕರಕಲಾಗಿದೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ತೀವ್ರಗೊಂಡಿದ್ದು, ಇಲ್ಲಿನ ಅರಣ್ಯ ಪ್ರದೇಶವೂ ಸೇರಿದಂತೆ ಹಲವು ಮನೆಗಳು ಭಸ್ಮವಾಗಿವೆ.
ಈ ಜ್ವಾಲಾಮುಖಿಯಿಂದ ಸಂಭವಿಸಿದ ವಿವಿಧ ಅವಘಡಗಳಲ್ಲಿ ಈವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.
ಕಳೆದೊಂದು ವಾರದಿಂದ ಇಂಡೋನೇಷ್ಯಾದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಉಕ್ಕಿ ಹರಿಯುತ್ತಿದ್ದು, ಸಮೀಪದ ಒಂದಿಡೀ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಅಪಾಯದ ವಲಯ (ಡೇಂಜರ್ ಝೋನ್)ವನ್ನು ವಿಸ್ತರಿಸಲಾಗಿದೆ. ದೇಶದ ಜ್ವಾಲಾಮುಖಿ ಏಜೆನ್ಸಿಯು ಜ್ವಾಲಾಮುಖಿಯ ಅಲರ್ಟ್ ಅನ್ನು ಘೋಷಿಸಿದೆ. ಮಧ್ಯರಾತ್ರಿಯ ನಂತರ ಆಗಾಗ್ಗೆ ಸ್ಫೋಟಗಳು ಸಂಭವಿಸಿರುವುದರಿಂದ ಅಪಾಯದ ವಲಯವನ್ನು 7-ಕಿ.ಮೀಗೆ (4.3-ಮೈಲಿ) ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಕಳೆದ ಗುರುವಾರದಿಂದ ಜ್ವಾಲಾಮುಖಿಯು ಪ್ರತಿದಿನ 2,000 ಮೀಟರ್ (6,500 ಅಡಿ) ಎತ್ತರದವರೆಗೆ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳುತ್ತಿದೆ. ಭಾನುವಾರ ಮಧ್ಯರಾತ್ರಿ ನಂತರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದಲ್ಲಿ ದಟ್ಟವಾದ ಕಂದುಬಣ್ಣದ ಬೂದಿಯನ್ನು ಉಗುಳಿದೆ. ಈ ಬಿಸಿ ಬೂದಿಯು ಹತ್ತಿರದ ಹಳ್ಳಿಗೆ ಅಪ್ಪಳಿಸಿದೆ. ಅವಘಡದಲ್ಲಿ ಕ್ಯಾಥೋಲಿಕ್ ಸನ್ಯಾಸಿಗಳ ಕಾನ್ವೆಂಟ್ ಸೇರಿದಂತೆ ಹಲವಾರು ಮನೆಗಳು ಸುಟ್ಟುಹೋಗಿವೆ ಎಂದು ಜ್ವಾಲಾಮುಖಿ ಮೇಲ್ವಿಚಾರಣಾ ಅಧಿಕಾರಿ ಫರ್ಮಾನ್ ಯೋಸೆಫ್ ಹೇಳಿದ್ದಾರೆ.
ಅಂದಹಾಗೆ ಇಂಡೋನೇಷ್ಯಾ ದೇಶ "ಪೆಸಿಫಿಕ್ ರಿಂಗ್ ಆಫ್ ಫೈರ್" ಭೂಕಂಪನ ಫಲಕಗಳ ಮೇಲೆ ಇದ್ದು, ಇದು ಬಹು ಭೂಕಂಪನ ಫಲಕಗಳ ಮೇಲೆ ಹೆಚ್ಚಿನ ಭೂಕಂಪನ ಚಟುವಟಿಕೆಯ ಪ್ರದೇಶವಾಗಿದೆ. ಈ ಸ್ಫೋಟವು ಇಂಡೋನೇಷ್ಯಾದಲ್ಲಿ ವಿವಿಧ ಜ್ವಾಲಾಮುಖಿಗಳ ಸ್ಫೋಟಗಳ ಸರಣಿಯನ್ನು ಅನುಸರಿಸುತ್ತದೆ. ಮೇ ತಿಂಗಳಲ್ಲಿ, ದೂರದ ಹಲ್ಮಹೆರಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಸಿ ಇಲ್ಲಿನ ಮೌಂಟ್ ಇಬು, ಏಳು ಹಳ್ಳಿಗಳಿಂದ ಜನರನ್ನು ಸ್ಥಳಾಂತರಿಸಲು ಕಾರಣವಾಯಿತು. ಉತ್ತರ ಸುಲವೆಸಿಯ ರುವಾಂಗ್ ಜ್ವಾಲಾಮುಖಿ ಮೇ ತಿಂಗಳಲ್ಲಿ ಸ್ಫೋಟಗೊಂಡಿತ್ತು. ಈ ವೇಳೆ 12,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು.