ವಾಷಿಂಗ್ಟನ್: ನಮ್ಮ ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟವನ್ನು ನಾವು ಮುಂದುವರಿಸುತ್ತೇನೆ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದು ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರು ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬೆನ್ನಲ್ಲೇ ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಬೆಂಬಲಿಗರನ್ನುದ್ದೇಶಿಸಿ ಭಾಷಣ ಮಾಡಿದ ಅವರು, ಮೊದಲಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಚುನಾವಣಾ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ನಿಮ್ಮೆಲ್ಲರ ಬೆಂಬಲಕ್ಕೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಆಭಾರಿಯಾಗಿದ್ದೇನೆ. ಇಂದು ಮುಂಜಾನೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಾನು ಮಾತುಕತೆ ನಡೆಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿಗಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿಸಲು ನಾವು ಅವರಿಗೆ ಸಹಕರಿಸುತ್ತೇವೆಂದು ಹೇಳಿದರು.
ನಾವು ಯಾವುದಕ್ಕಾಗಿ ಹೋರಾಡಿದ್ದೆವೋ, ಮತ ಚಲಾಯಿಸಿದ್ದೆವೋ ಆ ಫಲಿತಾಂಶ ನಮಗೆ ದೊರಕಿಲ್ಲ. ಆದರೆ, ಅಮೆರಿಕಾದ ಭರವಸೆಯ ಬೆಳಕು ಯಾವತ್ತೂ ಪ್ರಕಾಶಮಾನವಾಗಿ ಬೆಳಗಲಿದೆ. ನಮ್ಮ ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟವನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ದೇಶದ ಜನರ ಸ್ವಾತಂತ್ರ್ಯ, ನ್ಯಾಯ, ಅವಕಾಶ ಮತ್ತು ಘನತೆಗಾಗಿ ಹೋರಾಟ ಮುಂದುವರಿಯಲಿದೆ. ಈ ಹಿನ್ನಡೆಗಳ ನಡುವೆಯೂ ಆಶಾವಾದ, ನಂಬಿಕೆ, ಸತ್ಯ ಮತ್ತು ಬೆಳಕು ನಮ್ಮನ್ನು ಮುನ್ನಡೆಸಲಿದೆ. ನಾವು ಕರಾಳ ದಿನಗಳನ್ನು ಸಮೀಪಿಸುತ್ತಿದ್ದೇವೆ ಎಂಬ ಆತಂಕ ಜನರಲ್ಲಿದೆ. ಆದರೆ, ಹಾಗಾಗುವುದಿಲ್ಲ ಎಂದು ಭಾವಿಸುತ್ತೇನೆಂದು ಹೇಳಿದರು.
ಸರಿಸುಮಾರು ಎರಡೂವರೆ ಶತಮಾನದ ಅಮೆರಿಕಾದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆ ಕಂಡ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನ.5ರಂದು ಅಧ್ಯಕ್ಷೀಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಟ್ರಂಪ್, ತಮ್ಮ ಎದುರಾಳಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ ಅಮೆರಿಕಾದ 47ನೇ ಅಧ್ಯಕ್ಷರಾಗಿ ಜಯದ ನಗೆ ಬೀರಿದ್ದಾರೆ. ಟ್ರಂಪ್ ಅವರು ಜನವರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿಂದೆ 2017-21ರ ಅವಧಿಯಲ್ಲೂ ಅಮೆರಿಕಾದ ಅಧ್ಯಕ್ಷರಾಗಿದ್ದ ಟ್ರಂಪ್ ಅವರ ಈಗಿನ ಗೆಲುವನ್ನು ಐತಿಹಾಸಿಕ ಎಂದೇ ಬಣ್ಣಿಸಲಾಗುತ್ತಿದೆ.
ಇದರೊಂದಿಗೆ ಅಮೆರಿಕಾ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯನ್ನು ಕಾಣಬಹುದು ಮತ್ತು ಭಾರತೀಯ ಮೂಲದವರೊಬ್ಬರು ಮೊದಲ ಬಾರಿಗೆ ಅಮೆರಿಕಾದ ಅಧ್ಯಕ್ಷರಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಇನ್ನು ಟ್ರಂಪ್ ಅವರ ಈ ಐತಿಹಾಸಿಕ ಗೆಲುವಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಐತಿಹಾಸಿಕ ಗೆಲುವಿಗಾಗಿ ಹೃತ್ಪೂರ್ವಕ ಅಭಿನಂದನೆಗಳು ನನ್ನ ಗೆಳೆಯ ಡೊನಾಲ್ಡ್ ಟ್ರಂಪ್. ಭಾರತ ಮತ್ತು ಅಮೆರಿಕಾದ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ. ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
Advertisement