ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿ ಭಾರಿಸುತ್ತಿದ್ದಂತೆಯೇ ಅತ್ತ ಅಮೆರಿಕದಲ್ಲಿರುವ ಅಕ್ರಮ ವಲಸಿಗರಲ್ಲಿ ಆತಂಕ ಶುರುವಾಗಿದ್ದು, ಗೂಗಲ್ ನಲ್ಲಿ 'ಕೆನಡಾಗೆ ಪಲಾಯನ ಮಾಡುವುದು ಹೇಗೆ?' ಎಂಬ ಸರ್ಚ್ ಫುಲ್ ಟ್ರೆಂಡ್ ಆಗುತ್ತಿದೆ.
ಹೌದು.. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ವಲಸಿಗರ ಕುರಿತು ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಇದೀಗ ಡೊನಾಲ್ಡ್ ಟ್ರಂಪ್ ಸರ್ಕಾರ ಇನ್ನೂ ಅಧಿಕಾರವನ್ನೇ ಸ್ವೀಕರಿಸಿಲ್ಲ..
ಅದಾಗಲೇ ಅಮೆರಿಕದಲ್ಲಿರುವ ಅಕ್ರಮ ವಲಸಿಗರಲ್ಲಿ ವ್ಯಾಪಕ ಆತಂಕ ಶುರುವಾಗಿದೆ. ಈಗಾಗಲೇ ಸಾಕಷ್ಟು ವಲಸಿಗರು ಕೆನಡಾದತ್ತ ಮುಖ ಮಾಡಿದ್ದು, ಕೆನಡಾ ಪ್ರವೇಶಕ್ಕೆ ನಾನಾ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ.
ಗಡಿಯಲ್ಲಿ ಆತಂಕ, ಕಟ್ಟೆಚ್ಚರ
ಇನ್ನು ಇತ್ತ ಅಮೆರಿಕ ಚುನಾವಣೆ ಮುಕ್ತಾಯದ ಬೆನ್ನಲ್ಲೇ ಅಮೆರಿಕ ಕೆನಡಾ ಗಡಿಯಲ್ಲಿ ವಲಸಿಗರ ಚಟುವಟಿಕೆಗಳು ತೀವ್ರಗೊಂಡಿದ್ದು, ಅಮೆರಿಕದಿಂದ ಕೆನಡಾಕ್ಕೆ ಬರುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ವಲಸಿಗರು ನಮ್ಮ ದೇಶದ ರಕ್ತವನ್ನು ವಿಷಪೂರಿತಗೊಳಿಸುತ್ತಿದ್ದಾರೆ.., ಅಮೆರಿಕಾದ ಇತಿಹಾಸದಲ್ಲಿಯೇ ಅತಿ ದೊಡ್ಡ ಸಾಮೂಹಿಕ ಗಡೀಪಾರು ಮಾಡುವುದಾಗಿ" ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಮೂಲ ಅಮೆರಿಕನ್ನರಿಗೆ ಭರವಸೆ ನೀಡಿದ್ದಾರೆ.
ಇದು ವಲಸಿಗರ ಆತಂಕಕ್ಕೆ ಕಾರಣವಾಗಿದ್ದು, ಈಗಾಗಲೇ ಸಾಕಷ್ಟು ವಲಸಿಗರು ಕೆನಡಾದತ್ತ ಮುಖ ಮಾಡಿದ್ದಾರೆ. 2017 ರಿಂದ 2021 ರವರೆಗಿನ ಟ್ರಂಪ್ ಅವರ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ, ಹೈಟಿಯನ್ನರು ಸೇರಿದಂತೆ ಹತ್ತಾರು ವಲಸಿಗರು ಉತ್ತರದಿಂದ ಕೆನಡಾಕ್ಕೆ ಪಲಾಯನ ಮಾಡಿದ್ದರು.
ಇದೇ ವಿಚಾರವಾಗಿ ಕೆನಡಾ ಸರ್ಕಾರ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಹಾಲಿ ಪರಿಸ್ಥಿತಿ ಕುರಿತು ಮಾತನಾಡಿರುವ ಕೆನಡಿಯನ್ ಮೌಂಟೆಡ್ ಪೊಲೀಸ್ ವಕ್ತಾರ ಸಾರ್ಜೆಂಟ್ ಚಾರ್ಲ್ಸ್ ಪೋರಿಯರ್, 'ನಾವು ಹೆಚ್ಚಿನ ಎಚ್ಚರಿಕೆಯಲ್ಲಿದ್ದೇವೆ.
ಏನಾಗಲಿದೆ ಎಂದು ಕಾದು ನೋಡುತ್ತಿದ್ದೇವೆ. ಏಕೆಂದರೆ ವಲಸೆಯ ಕುರಿತ ಟ್ರಂಪ್ ಅವರ ನಿಲುವು ಕೆನಡಾಕ್ಕೆ ಅಕ್ರಮ ಮತ್ತು ಅನಿಯಮಿತ ವಲಸೆಯನ್ನು ಹೆಚ್ಚಿಸಬಹುದು ಎಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.
ಅಂತೆಯೇ ಒಟ್ಟಾವಾದಲ್ಲಿ, ಉಪ ಪ್ರಧಾನ ಮಂತ್ರಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಶುಕ್ರವಾರ ಕೆನಡಾ ಮತ್ತು ಒಳಬರುವ ಟ್ರಂಪ್ ಆಡಳಿತದ ನಡುವೆ ಉದ್ಭವಿಸಬಹುದಾದ ಸಮಸ್ಯೆಗಳನ್ನು ನಿಭಾಯಿಸುವ ಕಾರ್ಯವನ್ನು ನಿರ್ವಹಿಸುವ ಮಂತ್ರಿಗಳ ಗುಂಪಿನೊಂದಿಗೆ ಚರ್ಚೆ ನಡೆಸಿದರು. ವಲಸಿಗರ ಆಗಮನದಲ್ಲಿ ಸಂಭವನೀಯ ಏರಿಕೆಗೆ ಕೆನಡಾ ಸಿದ್ಧವಾಗಿದೆ. ನಮ್ಮಲ್ಲಿ ಯೋಜನೆ ಇದೆ. ಕೆನಡಿಯನ್ನರು ತಿಳಿದಿರಬೇಕು... ನಮ್ಮ ಗಡಿಗಳು ಸುರಕ್ಷಿತ ಮತ್ತು ಸುರಕ್ಷಿತವಾಗಿದೆ ಮತ್ತು ನಾವು ಅವುಗಳನ್ನು ನಿಯಂತ್ರಿಸುತ್ತೇವೆ ಎಂದರು.
ಪಲಾಯನ ಕುರಿತು ಗೂಗಲ್ ನಲ್ಲಿ ಟ್ರೆಂಡ್ ಆರಂಭ
ಇನ್ನು ಮಂಗಳವಾರದ ಚುನಾವಣೆಯ ನಂತರ ತಕ್ಷಣವೇ, ಕೆನಡಾಕ್ಕೆ ತೆರಳುವ ಕುರಿತು ಅಮೆರಿಕದಲ್ಲಿ ಆನ್‌ಲೈನ್ ಹುಡುಕಾಟಗಳು ಹತ್ತು ಪಟ್ಟು ಹೆಚ್ಚಿವೆ. ಟ್ರಂಪ್ ಅಧಿಕಾರಕ್ಕೆ ಮರಳುವುದನ್ನು ವಿರೋಧಿಸುವ ಕೆಲವು ಅಮೆರಿಕ ನಾಗರಿಕರು ಕೆನಡಾದ ವಲಸೆ ಮತ್ತು ಸ್ಥಳಾಂತರ ಸೇವೆಗಳ ಕುರಿತು ಗೂಗಲ್ ನಲ್ಲಿ ಹುಡುತ್ತಿದ್ದಾರೆ ಎಂದು ವರದಿಯಾಗಿದೆ. "ಕೆನಡಾಕ್ಕೆ ವಲಸೆ," "ಕೆನಡಾ ವಲಸೆ ಪ್ರಕ್ರಿಯೆ" ಮತ್ತು "ಕೆನಡಾಕ್ಕೆ ಹೇಗೆ ಹೋಗುವುದು" ಮುಂತಾದ ಹುಡುಕಾಟ ಪದಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಿದ್ದಾರೆ.
Advertisement