ವಾಷಿಂಗ್ಟನ್: ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಸೋಲು ಕಾಣುವಂತೆ ಮಾಡಿ, ಗೆಲುವಿನ ನಗೆ ಬೀರಿದ್ದಾರೆ.
ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್‌ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾವನ್ನು ನಿರ್ಣಾಯಕ ರಾಜ್ಯಗಳು ಎಂದು ಹೇಳಲಾಗುತ್ತಿತ್ತು.
ಈ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ತಮ್ಮ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಟ್ರಂಪ್ ಸೋಲಿಸಿದ್ದು, ಗೆಲುವಿನ ನಗೆ ಬೀರಿದ್ದಾರೆ. ಟ್ರಂಪ್‌ಗೆ 312 ಎಲೆಕ್ಟರ್‌ಗಳು ಹಾಗೂ ಕಮಲಾ ಅವರಿಗೆ 226 ಎಲೆಕ್ಟರ್‌ಗಳ ಬೆಂಬಲ ದೊರೆತಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಒಟ್ಟು 538 ಎಲೆಕ್ಟರ್‌ಗಳ ಪೈಕಿ 270 ಎಲೆಕ್ಟರ್‌ಗಳ ಬೆಂಬಲದ ಅಗತ್ಯವಿತ್ತು.
ಇದರೊಂದಿಗೆ ರಿಪಬ್ಲಿಕನ್ ಪಕ್ಷವು ಸೆನೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸಿದೆ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಬಾರಿಗೆ ಅಧ್ಯಕ್ಷೀಯ ಗಾದಿ ಏರಿದ್ದಾರೆ. ಮ್ಯಾಜಿಕ್ ನಂಬರ್ 270 ಅನ್ನು ದಾಟಿರುವ ಟ್ರಂಪ್ ಅವರು,. 2025 ರ ಜನವರಿ 20 ರಂದು ಅಮೆರಿಕಾದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟ್ರಂಪ್ ಅವರು, ಮಾಜಿ ಅಧ್ಯಕ್ಷ ಗ್ರೋವರ್ ಕ್ಲೀವ್‌ಲ್ಯಾಂಡ್ ನಂತರ ಒಮ್ಮೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಬಿಡುವಿನ ನಂತರ ಮತ್ತೊಮ್ಮೆ ಅಧ್ಯಕ್ಷರಾದ ಎರಡನೇ ವ್ಯಕ್ತಿ ಆಗಲಿದ್ದಾರೆ. ಗ್ರೋವರ್ 1884 ಮತ್ತು 1892 ರ ಚುನಾವಣೆಗಳಲ್ಲಿ ಅಧ್ಯಕ್ಷರಾಗಿ ಗೆದ್ದಿದ್ದರು. ಟ್ರಂಪ್ 2016 ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2020 ರಲ್ಲಿ ಜೋ ಬೈಡನ್ ವಿರುದ್ಧ ಸೋತಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ಗೆಲ್ಲಲು ಟ್ರಂಪ್ ಇನ್ನಿಲ್ಲದ ಕಸರತ್ತು ಮಾಡಬೇಕಾಯಿತು. ಅವರ ಗೆಲುವಿಗೆ ಹಲವು ಪ್ರಮುಖ ಅಂಶಗಳು ಕಾರಣವಾಗಿವೆ. ಅಮೆರಿಕದ ಆರ್ಥಿಕತೆ, ಅಕ್ರಮ ವಲಸೆಯಂತಹ ವಿಷಯಗಳಲ್ಲಿ ಟ್ರಂಪ್ ಅವರ ನಿಲುವು ಮತದಾರರನ್ನು ಆಕರ್ಷಿಸಿದಂತಿದೆ. ಮೇಲಾಗಿ, ಯುವ ಮತದಾರರು ಈ ಬಾರಿ ಟ್ರಂಪ್‌ಗೆ ಮಣೆ ಹಾಕಿದ್ದಾರೆ.
ಮಾಜಿ ಅಧ್ಯಕ್ಷರ ಮೇಲೆ ದಾಖಲಾದ ಹಲವು ಕೇಸ್ಗಳು ಚುನಾವಣೆಯಲ್ಲಿ ಪ್ಲಸ್ ಆಗಿರುವ ಪರಿಣಮಿಸಿರುವ ಸಾಧ್ಯತೆ ಇದೆ. ಬೈಡನ್ ಸರ್ಕಾರ ಟ್ರಂಪ್ ಅವರನ್ನು ರಾಜಕೀಯ ಬಲಿಪಶುವನ್ನಾಗಿ ಮಾಡುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿತ್ತು. ಹೀಗಾಗಿಯೇ, ಅವರ ಸಾರ್ವಜನಿಕ ಬೆಂಬಲವು ಶೇಕಡಾ 40 ಕ್ಕಿಂತ ಕಡಿಮೆ ಇರಲಿಲ್ಲ. ಪದೇ ಪದೆ ಅವರನ್ನು ಜೈಲು, ಕೋರ್ಟ್ ಮುಂದೆ ನಿಲ್ಲಿಸಿದ್ದು, ಜನರಲ್ಲಿ ಟ್ರಂಪ್ ಮೇಲೆ ಸಹಾನುಭೂತಿ ಮೂಡಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ.
Advertisement