ಪಾಕಿಸ್ತಾನದಲ್ಲಿ ಮತ್ತೆ ಕೋಲಾಹಲ: ಪೊಲೀಸರೊಂದಿಗೆ Imran Khan ಬೆಂಬಲಿಗರ ಘರ್ಷಣೆ; ಕನಿಷ್ಠ 5 ಸಾವು, 'ಕಂಡಲ್ಲಿ ಗುಂಡು' ಆದೇಶ!

ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ ನಾಲ್ವರು ಸೈನಿಕರು ಮತ್ತು ಕನಿಷ್ಠ ಒಬ್ಬ ಪ್ರತಿಭಟನಾಕಾರರು ಸಾವನ್ನಪ್ಪಿದ್ದು, ಈ ಬೆಳವಣಿಗೆಯ ಹಿನ್ನಲೆಯಲ್ಲಿ ಪಾಕಿಸ್ತಾನ ಸೇನೆ ಗಂಡಲ್ಲಿ ಗುಂಡು ಆದೇಶ ನೀಡಿದೆ.
Imran Khan Supporters Clash With Cops In Pakistan
ಪಾಕಿಸ್ತಾನದಲ್ಲಿ ಮತ್ತೆ ಹಿಂಸಾಚಾರಚಿತ್ರಕೃಪೆ: AFP
Updated on

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಮಾಜಿ ಪ್ರಧಾನಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಬೆಂಬಲಿಗರು ಬೀದಿಗಿಳಿದು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ.

ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನಾಕಾರರು ಸೋಮವಾರ ತಡರಾತ್ರಿ ರಾಜಧಾನಿ ಇಸ್ಲಾಮಾಬಾದ್‌ಗೆ ಪ್ರವೇಶಿಸಿದಾಗ ಹಿಂಸಾಚಾರ ಭುಗಿಲೆದ್ದಿತು.

ಪಾಕಿಸ್ತಾನದಾದ್ಯಂತ ಈ ಪ್ರತಿಭಟನೆ ನಡೆದಿದ್ದು, ಈ ವೇಳೆ ಪೊಲೀಸರು ಮತ್ತು ಪಿಟಿಐ ಕಾರ್ಯಕರ್ತರ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಕನಿಷ್ಠ ಐದು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ ನಾಲ್ವರು ಸೈನಿಕರು ಮತ್ತು ಕನಿಷ್ಠ ಒಬ್ಬ ಪ್ರತಿಭಟನಾಕಾರರು ಸಾವನ್ನಪ್ಪಿದ್ದು, ಈ ಬೆಳವಣಿಗೆಯ ಹಿನ್ನಲೆಯಲ್ಲಿ ಪಾಕಿಸ್ತಾನ ಸೇನೆ ಶೂಟ್ ಅಟ್ ಸೈಟ್ (ಗಂಡಲ್ಲಿ ಗುಂಡು) ಆದೇಶ ನೀಡಿದೆ. ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಗ್ರಹಿಸಲು ಪ್ರಧಾನಿ ಶೆಹಬಾಜ್ ಷರೀಫ್ ಅವರ ಸರ್ಕಾರ ನಿರಂತರ ಪ್ರಯತ್ನ ನಡೆಸಿದೆ.

ಭದ್ರತೆಗಾಗಿ ಆರ್ಟಿಕಲ್ 245 ರ ಅಡಿಯಲ್ಲಿ ಸೈನ್ಯವನ್ನು ನಿಯೋಜಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಪಾಲನೆಗಾಗಿ 'ಕಂಡಲ್ಲಿ ಗುಂಡು' ಆದೇಶ ನೀಡಲಾಗಿದೆ. ಈ ವರೆಗೂ 5 ಮಂದಿ ಸಾವಿಗೀಡಾಗಿ 119ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ತಲುಪಿದ ಇಮ್ರಾನ್ ಖಾನ್ ಬೆಂಬಲಿಗರು

ಪ್ರತಿಭಟನಾ ನಿರತ ಇಮ್ರಾನ್ ಖಾನ್ ಬೆಂಬಲಿಗರು ಇಂದು ರಾಜಧಾನಿ ಇಸ್ಲಾಮಾಬಾದ್ ತಲುಪಿದ್ದು, ಭದ್ರತಾ ಪಡೆಗಳೊಂದಿಗೆ ಸಂಘರ್ಷಕ್ಕೆ ಇಳಿದ ಕಾರಣ ಹಿಂಸಚಾರ ನಡೆದಿದೆ. ಇದರೊಂದಿಗೆ, ಪಿಟಿಐ ಪ್ರತಿಭಟನೆ ಹಿಂಸಾತ್ಮಕವಾಗಿದ್ದು, ಅಲ್ಲಿ ಮತ್ತೊಮ್ಮೆ ಅಸ್ಥಿರತೆಯ ಭೀತಿ ಕಾಡಿದೆ. ಪ್ರತಿಭಟನಾ ಮೆರವಣಿಗೆ ಹಿಂಸಚಾರಕ್ಕೆ ತಿರುಗಿದ್ದು, ಪೊಲೀಸರು, ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಈ ನಡುವೆ, ಪ್ರತಿಭಟನಾಕಾರರು ಪ್ರತಿಭಟನೆ ನಡೆಸುವುದಕ್ಕಾಗಿ ಡಿ ಚೌಕ್‌ ತಲುಪಲು ಪ್ರಯತ್ನಿಸಿದ್ದರು. ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್‌ (ಪಿಟಿಐ) ನಾಯಕ ಇಮ್ರಾನ್ ಖಾನ್ ಅವರು ನವೆಂಬರ್ 24 ರಂದು ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸುವಂತೆ ನೀಡಿದ್ದ ಕರೆಗೆ ಸ್ಪಂದಿಸಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು.

ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂದಪುರ್ ಮತ್ತು ವಿರೋಧ ಪಕ್ಷದ ನಾಯಕ ಒಮರ್ ಅಯೂಬ್ ನೇತೃತ್ವದ ಪಿಟಿಐ ಬೆಂಗಾವಲು ಪಡೆ ಇಸ್ಲಾಮಾಬಾದ್ ತಲುಪಿದೆ. ಈ ಸಮಯದಲ್ಲಿ, ಅವರು ಗಾಜಿ ಬ್ರೋತಾ ಸೇತುವೆಯ ಮೇಲೆ ಪೊಲೀಸರಿಂದ ಪ್ರತಿರೋಧ ಎದುರಿಸಬೇಕಾಯಿತು. ಸ್ಥಳದಲ್ಲಿ ಸಂಘರ್ಷ ನಡೆಸಿದ ಪ್ರತಿಭಟನಾಕಾರರು ಪೊಲೀಸ್ ನಿರ್ಬಂಧವನ್ನು ಮುರಿದು, ಸುಮಾರು 2 ಕಿಮೀ ಉದ್ದದ ಬೆಂಗಾವಲು ಪಡೆ ಮುಂದೆ ಸಾಗಿದ್ದಾಗಿ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಅಂದಹಾಗೆ 'ಜನಾದೇಶ' ತಿರುಚಿವಿಕೆ, ಇಮ್ರಾನ್ ಖಾನ್ ಅನ್ಯಾಯದ ಬಂಧನ ಮತ್ತು 26ನೇ ತಿದ್ದುಪಡಿಯ ಅಂಗೀಕಾರವನ್ನು ಖಂಡಿಸಿ ಇಮ್ರಾನ್ ಖಾನ್ ಬೆಂಬಲಿಗರು ನವೆಂಬರ್ 24 ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿದ್ದರು.

Imran Khan Supporters Clash With Cops In Pakistan
ಪಾಕಿಸ್ತಾನ: ಉಗ್ರರಿಂದ ಮೂರು ವ್ಯಾನ್‌ಗಳ ಮೇಲೆ ಗುಂಡಿನ ದಾಳಿ; ಕನಿಷ್ಠ 50 ಮಂದಿ ಸಾವು

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com