
ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಬಾಂಧವ್ಯ ಹದಗೆಡಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರೇ ಕಾರಣ ಎಂದು ಭಾರತ ವಿದೇಶಾಂಗ ಸಚಿವಾಲಯ(ಎಂಇಎ) ಗುರುವಾರ ಹೇಳಿದೆ.
ಖಾಲಿಸ್ತಾನಿ ಪ್ರತ್ರ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಬಂಧ ಬುಧವಾರ ತನಿಖಾ ಆಯೋಗದ ಮುಂದೆ ಹಾಜರಾದ ಟ್ರುಡೊ, ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ್‌ಗಳ ಪಾತ್ರವಿದೆ ಎಂಬುದು ಗುಪ್ತಚರ ಮಾಹಿತಿಯಾಗಿದೆ. ಈ ನಮ್ಮ ಬಳಿ ಯಾವುದೇ ಗಟ್ಟಿಯಾದ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಭಾರತೀಯ ವಿದೇಶಾಂಗ ಕಚೇರಿಯು, ಕಳೆದ ವರ್ಷ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಕೈವಾಡವಿದೆ ಎಂದು ಟ್ರುಡೋ ಆರೋಪ ಮಾಡಿದ್ದರು. ಆದರೆ, ಇದಕ್ಕೆ ಬೇಕಾದ ಸ್ಥಿರ ಹಾಗೂ ಖಚಿತ ಸಾಕ್ಷ್ಯಾಧಾರಗಳಿಲ್ಲ ಎಂದು ಇದೀಗ ಅವರೇ ಒಪ್ಪಿಕೊಂಡಿದ್ದಾರೆ. ನಾವು ಈವರೆಗೂ ಹೇಳಿಕೊಂಡು ಬಂದಿದ್ದೇ ಇಂದು ನಿಜವಾಗಿದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಭಾರತ ಮತ್ತು ಭಾರತದ ರಾಜತಾಂತ್ರಿಕರ ವಿರುದ್ಧ ಆರೋಪ ಮಾಡುತ್ತಾ ಬಂದಿರುವ ಕೆನಡಾ, ತಾನು ಮಾಡಿರುವ ಗಂಭೀರ ಆರೋಪಗಳನ್ನು ಸಾಬೀತು ಮಾಡಸುಯಾವುದೇ ಪುರಾವೆಗಳನ್ನು ನಮಗೆ ಪ್ರಸ್ತುತಪಡಿಸಿಲ್ಲ. ಈ ಅಲಕ್ಷ್ಯದ ನಡವಳಿಕೆಯಿಂದ ಭಾರತ-ಕೆನಡಾ ಸಂಬಂಧ ಹದಗೆಟ್ಟಿದ್ದು, ಇದರಿಂದ ಉಂಟಾದ ಹಾನಿಯ ಸಂಪೂರ್ಣ ಹೊಣೆ ಕೆನಡಾ ಪ್ರಧಾನಿ ಟ್ರುಡೊ ಅವರ ಮೇಲಿದೆ ಎಂದು ಹೇಳಿದ್ದಾರೆ.
ಭಾರತೀಯ ರಾಜತಾಂತ್ರಿಕರು ಮೋದಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕೆನಡಿಯನ್ನರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಈ ಮಾಹಿತಿಯನ್ನು ಭಾರತ ಸರ್ಕಾರ ಮತ್ತು ಅಪರಾಧ ಸಂಸ್ಥೆಗಳ ಉನ್ನತ ಆಡಳಿತಕ್ಕೆ ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಂತಹ ಕ್ರಿಮಿನಲ್ ಸಂಸ್ಥೆಗಳಿಗೆ ರವಾನಿಸುತ್ತಿದೆ ಎಂದು ಜಸ್ಟಿನ್ ಟ್ರುಡೋ ಆರೋಪಿಸಿದ್ದಾರೆ.
ಆದರೆ, ಭಾರತ ಈ ಆರೋಪವನ್ನು ನಿರಾಕರಿಸಿದ್ದು, ಇದು ಅಸಂಬದ್ಧ ಆರೋಪ. ಇದು ಟ್ರುಡೊ ಸರ್ಕಾರದ ರಾಜಕೀಯ ಅಜೆಂಡಾ ಎಂದು ಹೇಳಿದೆ.
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಸೆಪ್ಟೆಂಬರ್ 2023 ರಲ್ಲಿ ಕೆಲವು ಆರೋಪಗಳನ್ನು ಮಾಡಿದ್ದಾರೆ. ಆದರೆ, ಭಾರತ ಸರ್ಕಾರದಿಂದ ಹಲವಾರು ವಿನಂತಿಗಳ ಹೊರತಾಗಿಯೂ ಒಂದೇ ಒಂದು ಸಾಕ್ಷ್ಯವನ್ನು ಹಂಚಿಕೊಂಡಿಲ್ಲ ಎಂದು ತಿಳಿಸಿದೆ.
ನಾವು ಕೆನಡಾದಿಂದ ರಾಜತಾಂತ್ರಿಕ ಸಂವಹನವನ್ನು ಸ್ವೀಕರಿಸಿದ್ದು, ಆ ದೇಶದಲ್ಲಿನ ತನಿಖೆಗೆ ಸಂಬಂಧಿಸಿದ ವಿಷಯದಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು 'ಹಿತಾಸಕ್ತ ವ್ಯಕ್ತಿಗಳು' ಎಂದು ಸೂಚಿಸಿವೆ. ಭಾರತ ಸರ್ಕಾರ ಈ ಅಸಂಬದ್ಧ ಆರೋಪಗಳನ್ನು ಬಲವಾಗಿ ತಿರಸ್ಕರಿಸುತ್ತದೆ ಮತ್ತು ವೋಟ್ ಬ್ಯಾಂಕ್ ರಾಜಕೀಯದ ಸುತ್ತ ಕೇಂದ್ರೀಕೃತವಾಗಿರುವ ಟ್ರುಡೊ ಸರ್ಕಾರದ ರಾಜಕೀಯ ಕಾರ್ಯಸೂಚಿಗೆ ಅವರನ್ನು ಆರೋಪಿಸುತ್ತದೆ ಎಂದು ತಿಳಿಸಿತ್ತು.
ಖಲಿಸ್ತಾನಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ರನ್ನು ಜೂನ್ 2023ರಲ್ಲಿ ವ್ಯಾಂಕೋವರ್‌ನಲ್ಲಿರುವ ಅವರ ಮನೆಯ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಸರ್ಕಾರವು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಮಾಡಿತ್ತು. ಆದರೆ. ಕೆನಡಾ ಸರ್ಕಾರದ ಆರೋಪಗಳನ್ನು ಭಾರತ ಸರ್ಕಾರ ತಳ್ಳಿ ಹಾಕಿತ್ತು. ಮಾತ್ರವಲ್ಲದೇ ಕೆನಡಾ ಸರ್ಕಾರದ ವಿರುದ್ಧ ಕಿಡಿಕಾರಿತ್ತು.
ಕೆನಡಾ ಆರೋಪವನ್ನು ತಳ್ಳಿಹಾಕಿದ್ದ ಭಾರತ "ರಾಜಕೀಯ ಲಾಭಕ್ಕಾಗಿ ಭಾರತಕ್ಕೆ ಮಸಿ ಬಳಿಯುವ ಯತ್ನ ಎಂದು ಕಿಡಿಕಾರಿತ್ತು. ಪರಸ್ಪರ ಆರೋಪ-ಪ್ರತಿ ಆರೋಪಗಳ ಹಿನ್ನಲೆಯಲ್ಲಿ ಉಭಯದೇಶಗಳಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು.
Advertisement