'ನಾಳೆಯೇ ಯುದ್ಧ ಕೊನೆಗೊಳಿಸುತ್ತೇವೆ.. ಆದರೆ'; Hamas ಮುಖ್ಯಸ್ಥ Yahya Sinwar ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ Netanyahu ಎಚ್ಚರಿಕೆ!

'ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮತ್ತು ತನ್ನ ಬಳಿ ಇರುವ ಇಸ್ರೇಲಿ ಒತ್ತೆಯಾಳುಗಳನ್ನು ಹಿಂದಿರುಗಿಸಲು ಒಪ್ಪಿಕೊಂಡರೆ ನಾವು ಯುದ್ಧವನ್ನು ನಾಳೆ ಕೊನೆಗೊಳಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.
Netanyahu Message After Killing Of Hamas Chief Yahya Sinwar
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು
Updated on

ಟೆಲ್ ಅವೀವ್: ಅಕ್ಟೋಬರ್ 7ರ ಇಸ್ರೇಲ್ ಮೇಲಿನ ದಾಳಿ ರೂವಾರಿ ಹಮಾಸ್ ಉಗ್ರ ಸಂಘಟನೆಯ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, 'ನಾಳೆಯೇ ಯುದ್ಧ ಕೊನೆಗೊಳಿಸುತ್ತೇವೆ'.. ಎಂದು ಎಚ್ಚರಿಕೆ ನೀಡಿದ್ದಾರೆ.

ಗಾಜಾದಲ್ಲಿ ನಡೆದ ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ಗುರುವಾರ ಹೇಳಿಕೊಂಡಿದೆ. ಇದಕ್ಕೆ ಇಂಬು ನೀಡುವಂತೆ ಇಸ್ರೇಲ್ ಸೇನೆ ಡ್ರೋನ್ ವಿಡಿಯೋ ಕೂಡ ಬಿಡುಗಡೆ ಮಾಡಿದ್ದು, Yahya Sinwar ಸಿನ್ವಾರ್ ನನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ.

ತಲೆಗೆ ಗುಂಡೇಟು ಬಿದ್ದು ಕೈ ಕಟ್ ಆದ ಸ್ಥಿತಿಯಲ್ಲಿ Yahya Sinwar ಪತ್ತೆಯಾಗಿದ್ದು, ಇಸ್ರೇಲ್ ಸೇನಾಪಡೆಗಳು ಆತನ ಮೃತದೇಹವನ್ನು ಹೊತ್ತು ಸಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

'ನಾಳೆಯೇ ಯುದ್ಧ ಕೊನೆಗೊಳಿಸುತ್ತೇವೆ.. ಆದರೆ'; ನೇತನ್ಯಾಹು

ಇನ್ನು ಅತ್ತ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, 'ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಮತ್ತು ತನ್ನ ಬಳಿ ಇರುವ ಇಸ್ರೇಲಿ ಒತ್ತೆಯಾಳುಗಳನ್ನು ಹಿಂದಿರುಗಿಸಲು ಒಪ್ಪಿಕೊಂಡರೆ ನಾವು ಯುದ್ಧವನ್ನು ನಾಳೆ ಕೊನೆಗೊಳಿಸುತ್ತೇವೆ ಎಂದು ಹೇಳಿದ್ದಾರೆ.

'ಯಾಹ್ಯಾ ಸಿನ್ವಾರ್ ಸತ್ತಿದ್ದು, ಇಸ್ರೇಲಿ ರಕ್ಷಣಾ ಪಡೆಗಳ ಕೆಚ್ಚೆದೆಯ ಸೈನಿಕರು ರಾಫಾದಲ್ಲಿ ಆತನನ್ನು ಹೊಡೆದುರುಳಿಸಿದ್ದಾರೆ. ಆದರೆ ಆತನ ಅಂತ್ಯ ಗಾಜಾದಲ್ಲಿ ಯುದ್ಧದ ಅಂತ್ಯವಲ್ಲ ಎಂಬುದನ್ನು ಮರೆಯಬಾರದು. ಇದು ಅಂತ್ಯದ ಆರಂಭವಷ್ಟೇ. ಗಾಜಾದ ಜನರಿಗೆ, ನನ್ನ ಬಳಿ ಸರಳವಾದ ಸಂದೇಶವಿದೆ. ಈ ಯುದ್ಧವು ನಾಳೆಯೇ ಕೊನೆಗೊಳ್ಳಬಹುದು. ಹಮಾಸ್ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರೆ ಮತ್ತು ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಿದರೆ ಮಾತ್ರ ಅದು ಕೊನೆಗೊಳ್ಳುತ್ತದೆ ಎಂದು ನೆತನ್ಯಾಹು ಹೇಳಿದರು.

ಒತ್ತೆಯಾಳುಗಳು ಇರವಷ್ಟೂ ದಿನ ನಿಮಗೇ ಅಪಾಯ ಹೆಚ್ಚು

ಇದೇ ವೇಳೆ "ಹಮಾಸ್ ಗಾಜಾದಲ್ಲಿ 101 ಒತ್ತೆಯಾಳುಗಳನ್ನು ಹೊಂದಿದ್ದು, ಅದರಲ್ಲಿ 23 ದೇಶಗಳ ಪ್ರಜೆಗಳು, ಇಸ್ರೇಲ್‌ನ ನಾಗರಿಕರು ಸೇರಿದ್ದಾರೆ. ಅವರೆಲ್ಲರನ್ನೂ ಮನೆಗೆ ಕರೆತರಲು ನಮ್ಮ ಶಕ್ತಿಯಿಂದ ಎಲ್ಲವನ್ನೂ ಮಾಡಲು ಇಸ್ರೇಲ್ ಬದ್ಧವಾಗಿದೆ. ಅಂತೆಯೇ ಯಾರು ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸುತ್ತಾರೋ ಅವರೆಲ್ಲರ ಸುರಕ್ಷತೆಯನ್ನು ಇಸ್ರೇಲ್ ಖಾತರಿಪಡಿಸುತ್ತದೆ ಎಂದು ನಾನು ಈ ಮೂಲಕ ಭರವಸೆ ನೀಡುತ್ತೇನೆ ಎಂದರು.

ಅಲ್ಲದೆ ಒತ್ತೆಯಾಳುಗಳು ಇರುವಷ್ಟೂ ದಿನ ನಿಮಗೇ ಅಪಾಯ ಹೆಚ್ಚು ಎಂದು ಹೇಳಿರುವ ನೆತನ್ಯಾಹು, ನಮ್ಮ ಹೋರಾಟ ಇಷ್ಟಕ್ಕೇ ಮುಗಿಯುವುದಿಲ್ಲ. ಒತ್ತೆಯಾಳುಗಳ ಬಿಡುಗಡೆಯಾಗುವವರೆಗೂ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸುತ್ತಲೇ ಸಾಗುತ್ತದೆ. ಒತ್ತೆಯಾಳುಗಳ ಮೇಲೆ ದಾಳಿ ಮಾಡಿದವರಿಗೆ ನನ್ನ ಮತ್ತೊಂದು ಸಂದೇಶವಿದ್ದು, ನೀವು ಮಾಡಿದ ಪ್ರತೀ ದಾಳಿಗೂ ಸೂಕ್ತ ಪ್ರತೀಕಾರ ಇರುತ್ತದೆ.

ಇಸ್ರೇಲಿ ಪಡೆಗಳು ನಿಮ್ಮನ್ನು ಹುಡುಕಿ ಹುಡುಕಿ ನಿಮ್ಮ ಕೃತ್ಯಕ್ಕೆ ತಕ್ಕ ಪ್ರತಿಫಲ ನೀಡುತ್ತದೆ. ಇಸ್ರೇಲ್ ನಿಮ್ಮನ್ನು ಬೇಟೆಯಾಡಿ ನ್ಯಾಯ ಮಾಡುತ್ತದೆ. ಇರಾನ್ ನಿರ್ಮಿಸಿದ ಭಯೋತ್ಪಾದನೆಯ ಶಸ್ತ್ರ ಈಗ ಕುಸಿಯತೊಡಗಿದೆ. ನಸ್ರಲ್ಲಾಹ್ ಸತ್ತ, ಆತನ ಡೆಪ್ಯುಟಿ ಮೊಹ್ಸೆನ್ ಕೂಡ ಸತ್ತ. ಹನಿಯೇಹ್ ಸತ್ತ.. ಡೀಫ್ ಕೂಡ ಸತ್ತ. ಇದೀಗ ಸಿನ್ವಾರ್ ಕೂಡ ಹತನಾಗಿದ್ದಾನೆ ಎಂದು ಹೇಳಿದರು.

Netanyahu Message After Killing Of Hamas Chief Yahya Sinwar
Yahya Sinwar ಯಾರು? ಇಸ್ರೇಲ್ ಸೇನೆಗೆ ಈತ Most Wanted ಏಕೆ?

ಅಂತೆಯೇ ಇರಾನ್ ಸರ್ಕಾರ ತನ್ನದೇ ಆದ ಜನರ ಮೇಲೆ ಮತ್ತು ಇರಾಕ್, ಸಿರಿಯಾ, ಲೆಬನಾನ್ ಮತ್ತು ಯೆಮೆನ್ ಜನರ ಮೇಲೆ ಹೇರಿದ ಭಯೋತ್ಪಾದನೆಯ ಆಳ್ವಿಕೆಯು ಈಗ ಕೊನೆಗೊಳ್ಳುತ್ತದೆ. ಮಧ್ಯಪ್ರಾಚ್ಯದಲ್ಲಿ ಸಮೃದ್ಧಿ ಮತ್ತು ಶಾಂತಿಯ ಭವಿಷ್ಯವನ್ನು ಬಯಸುವ ಎಲ್ಲರೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಒಂದಾಗಬೇಕು. ಒಟ್ಟಾಗಿ, ನಾವು ಅಂಧಶಕ್ತಿಗಳನ್ನು ಹಿಮ್ಮೆಟಿಸಿ ನಮಗೆಲ್ಲರಿಗೂ ಬೆಳಕು ಮತ್ತು ಭರವಸೆಯ ಭವಿಷ್ಯವನ್ನು ರಚಿಸಬಹುದು ಎಂದು ನೇತನ್ಯಾಹು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com