ಇಸ್ಲಾಮಾಬಾದ್: 1999ರ ಭಾರತದ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಿ ಸೇನೆಯು ತನ್ನ ಪಾತ್ರವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಪಾಕಿಸ್ತಾನದ ರಕ್ಷಣಾ ದಿನದ ಅಂಗವಾಗಿ ರಾವಲ್ಪಿಂಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್, 1965, 1971 ಮತ್ತು 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಅನೇಕ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸೇನಾ ಮುಖ್ಯಸ್ಥರು, 1948, 1965, 1971 ಅಥವಾ 1999ರ ಕಾರ್ಗಿಲ್ ಯುದ್ಧವಿರಲಿ, ಪಾಕಿಸ್ತಾನ ಮತ್ತು ಇಸ್ಲಾಂ ಧರ್ಮಕ್ಕಾಗಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು. ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಸೇನೆಯು ತನ್ನ ನೇರ ಪಾತ್ರವನ್ನು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಇದು 'ಮುಜಾಯಿದ್ದೀನ್'ಗಳ ಕೆಲಸ ಎಂದು ಯಾವಾಗಲೂ ಅಧಿಕೃತವಾಗಿ ಹೇಳಿಕೊಂಡಿದೆ.
1999ರ ಯುದ್ಧದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಲಡಾಖ್‌ನಲ್ಲಿ ಸುಮಾರು ಮೂರು ತಿಂಗಳ ಹೋರಾಟದ ನಂತರ ಟೈಗರ್ ಹಿಲ್ ಸೇರಿದಂತೆ ಕಾರ್ಗಿಲ್ ಸೆಕ್ಟರ್‌ನಲ್ಲಿ ಎಲ್‌ಒಸಿಯ ಭಾರತದ ಭಾಗದಲ್ಲಿ ನುಸುಳುಕೋರರು ವಶಪಡಿಸಿಕೊಂಡ ಸ್ಥಾನಗಳನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ಮರು ವಶಪಡಿಸಿಕೊಂಡಿತ್ತು.
ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಕಾರ್ಗಿಲ್ ಸೆಕ್ಟರ್‌ನಿಂದ ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಕೇಳಿದ್ದರು. ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನೆನಪಿಗಾಗಿ 'ಕಾರ್ಗಿಲ್ ವಿಜಯ್ ದಿವಸ್' ಆಚರಿಸಲಾಗುತ್ತದೆ. ಪಾಕಿಸ್ತಾನಿ ನುಸುಳುಕೋರರ ವಿರುದ್ಧದ ಹೋರಾಟದಲ್ಲಿ ಒಟ್ಟು 545 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.
Advertisement