ಟೆಲ್ ಅವೀವ್: ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ಸ್ಫೋಟಿಸಿದ ನಂತರ, ಇಸ್ರೇಲ್ ಈಗ ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಜ್ಬುಲ್ಲಾ ವಿರುದ್ಧ ನೇರ ಯುದ್ಧವನ್ನು ಪ್ರಾರಂಭಿಸಿದೆ. 18 ವರ್ಷಗಳಲ್ಲೇ ಅತ್ಯಂತ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್ ಲೆಬನಾನ್ ಮೇಲೆ 1600 ದಾಳಿಗಳನ್ನು ನಡೆಸಿದ್ದು ದಾಳಿಯಲ್ಲಿ ಸುಮಾರು 500 ಜನರು ಸಾವನ್ನಪ್ಪಿದ್ದಾರೆ.
ಆತಂಕದ ಸಂಗತಿ ಎಂದರೆ ಅಮೆರಿಕ, ಇರಾನ್ ನಂತಹ ದೇಶಗಳೂ ಈ ಯುದ್ಧಕ್ಕೆ ಧುಮುಕುವ ಭೀತಿ ಎದುರಾಗಿದೆ. ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಪಡೆಗಳನ್ನು ಕಳುಹಿಸುವುದಾಗಿ ಅಮೆರಿಕ ಈಗಾಗಲೇ ಘೋಷಿಸಿದೆ. ಈ ದಾಳಿಗಳು ನಮ್ಮನ್ನು ಯುದ್ಧಕ್ಕೆ ಎಳೆಯುವ ಸಂಚು ಎಂದು ಇರಾನ್ ಆರೋಪಿಸುತ್ತಿದೆ.
ಏತನ್ಮಧ್ಯೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ನೀವು ಸುರಕ್ಷಿತ ಸ್ಥಳಗಳಿಗೆ ಹೋಗಿ, ಲೆಬನಾನ್ ಜನರೊಂದಿಗೆ ನಮಗೆ ಯಾವುದೇ ದ್ವೇಷವಿಲ್ಲ. ಆದರೆ ಹೆಜ್ಬುಲ್ಲಾವನ್ನು ಬಿಟ್ಟು ಬಿಡುವ ಪ್ರಶ್ನೆಯೇ ಇಲ್ಲ ಎಂದು ನೆತನ್ಯಾಹು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇಸ್ರೇಲ್‌ನ ಈ ದಾಳಿಗಳಿಂದಾಗಿ ಇಡೀ ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅಮೆರಿಕ ತನ್ನ ಇನ್ನೂ ಕೆಲವು ಯೋಧರನ್ನು ಕಳುಹಿಸುವುದಾಗಿ ಘೋಷಿಸಿದ್ದರೆ, ಇರಾನ್ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.
ಇಸ್ರೇಲಿ ಪಡೆಗಳು ಲೆಬನಾನ್‌ನಲ್ಲಿ 800 ಹೆಜ್ಬುಲ್ಲಾ ಗುರಿಗಳ ಮೇಲೆ ದಾಳಿಗಳನ್ನು ನಡೆಸಿದ ಬೆನ್ನಲ್ಲೇ ನೆತನ್ಯಾಹು ಹೇಳಿದ್ದರು. ಇಸ್ರೇಲ್ ವಾಯು ದಾಳಿ ಹಿನ್ನೆಲೆಯಲ್ಲಿ ಸಾವಿರಾರು ಲೆಬನಾನ್ ನಾಗರಿಕರೂ ದಕ್ಷಿಣದ ಕಡೆಗೆ ಹೋಗುತ್ತಿದ್ದಾರೆ. ಹೀಗಾಿ ದಕ್ಷಿಣದ ಬಂದರು ನಗರವಾದ ಸಿಡಾನ್‌ನ ಮುಖ್ಯ ಹೆದ್ದಾರಿಯು ರಾಜಧಾನಿ ಬೈರುತ್‌ಗೆ ಹೋಗುವ ಕಾರುಗಳಿಂದ ಜಾಮ್ ಆಗಿದೆ. ಇದು 2006 ಬಳಿಕ ನಡೆಯುತ್ತಿರುವ ಅತಿದೊಡ್ಡ ನಿರ್ಗಮನವಾಗಿದೆ. ಈ ದಾಳಿಯಲ್ಲಿ 35 ಮಕ್ಕಳು ಮತ್ತು 58 ಮಹಿಳೆಯರು ಸೇರಿದಂತೆ 492 ಜನರು ಸಾವನ್ನಪ್ಪಿದ್ದು 1,645 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಲೆಬನಾನ್‌ನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್, ಆಸ್ಪತ್ರೆಗಳು, ವೈದ್ಯಕೀಯ ಕೇಂದ್ರಗಳು ಮತ್ತು ಆಂಬ್ಯುಲೆನ್ಸ್‌ಗಳು ದಾಳಿಗೆ ಗುರಿಯಾಗಿವೆ. ಸರ್ಕಾರವು ದೇಶದ ಹೆಚ್ಚಿನ ಭಾಗಗಳಲ್ಲಿ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚಲು ಆದೇಶಿಸಿದ್ದು ಸ್ಥಳಾಂತರಗೊಂಡವರಿಗೆ ಆಶ್ರಯವನ್ನು ಸಿದ್ಧಪಡಿಸಲು ಪ್ರಾರಂಭಿಸಿದೆ. ಕೆಲವು ದಾಳಿಗಳು ದಕ್ಷಿಣ ಮತ್ತು ಪೂರ್ವ ಬೆಕಾ ಕಣಿವೆಯಲ್ಲಿ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ. ಕ್ರೂಸ್ ಕ್ಷಿಪಣಿಗಳು, ದೀರ್ಘ ಮತ್ತು ಅಲ್ಪ-ಶ್ರೇಣಿಯ ರಾಕೆಟ್‌ಗಳು ಮತ್ತು ದಾಳಿಯ ಡ್ರೋನ್‌ಗಳನ್ನು ಬಳಸಿ 1,600 ಹೆಜ್ಬೊಲ್ಲಾ ಗುರಿಗಳನ್ನು ಹೊಡೆದುರುಳಿಸಿದ್ದೇವೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
Advertisement