ವಿಶ್ವಸಂಸ್ಥೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಜಮ್ಮು ಮತ್ತು ಕಾಶ್ಮೀರ ವಿಚಾರ ಪ್ರಸ್ತಾಪಿಸಿ, ಕೆಣಕಿದ ಪಾಕಿಸ್ತಾನಕ್ಕೆ ಭಾರತ ಕಠಿಣ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಭಾವಿಕಾ ಮಂಗಳಾನಂದನ್ ಅವರು ಪ್ರತಿಕ್ರಿಯೆ ನೀಡಿ, ಜಾಗತಿಕ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಸಹಭಾಗಿತ್ವ ಇರುವ ಬಗ್ಗೆ ಆರೋಪಿಸಿದರು. ಅಲ್ಲದೆ, ಗಡಿಯಾಚೆಗಿನ ಭಯೋತ್ಪಾದನೆಯನ್ನು ರಾಜ್ಯ ನೀತಿಯಾಗಿ ಬಳಸುವ ಪಾಕಿಸ್ಥಾನದ ಸುದೀರ್ಘ ಇತಿಹಾಸದ ಬಗ್ಗೆ ಉಲ್ಲೇಖಿಸಿದರು.
ವಿಶ್ವಸಂಸ್ಥೆಯ ಅಧಿವೇಶನವು ಇಂದು ನಗೆಪಾಟಲಿಗೆ ಗುರಿಯಾಗಿದೆ. ಮಿಲಿಟರಿಯಿಂದಲೇ ನಡೆಯುವ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಹೆಸರುವಾಸಿಯಾಗಿರುವ, ಡ್ರಗ್ಸ್ ಮಾರಾಟ ಮತ್ತು ಅಪರಾಧ ಕೃತ್ಯಗಳಿಗೆ ಕುಖ್ಯಾತಿ ಪಡೆದಿರುವ ದೇಶವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಮೇಲೆ ಆರೋಪ ಹೊರಿಸಲು ಧೈರ್ಯ ಮಾಡಿರುವುದು ವಿಷಾದನೀಯ ಎಂದು ಹೇಳಿದರು.
ಭಯೋತ್ಪಾದನೆಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ. ಇಡೀ ವಿಶ್ವವೇ ತಿಳಿದಿರುವಂತೆಯೇ ಪಾಕಿಸ್ತಾನವು ನೆರೆಹೊರೆಯ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಯನ್ನೇ ದಾಳವಾಗಿ ಬಳಸಿಕೊಂಡಿದೆ. 2001ರಲ್ಲಿ ಭಾರತದ ಸಂಸತ್ತಿನ ಮೇಲೆ ದಾಳಿ, ವಾಣಿಜ್ಯ ನಗರಿ ಮುಂಬೈ ಮೇಲಿನ 26/11ರ ದಾಳಿ, ಮಾರುಕಟ್ಟೆ, ತೀರ್ಥಯಾತ್ರೆಯ ಮೇಲೆ ಸರಣಿ ದಾಳಿಗಳನ್ನು ಪಾಕ್ ಪ್ರಾಯೋಜಿತ ಭಯೋತ್ಪಾದಕ ಗುಂಪುಗಳು ನಡೆಸಿವೆ.
ಈ ಪಟ್ಟಿ ಇನ್ನೂ ಉದ್ದವಾಗಿದೆ. ಅಂತಹ ದೇಶವು ಹಿಂಸೆಯ ಬಗ್ಗೆ ಎಲ್ಲಿಯಾದರೂ ಮಾತನಾಡುವುದು ಕೇವಲ ಬೂಟಾಟಿಕೆಯಷ್ಟೇ. ವಿಶ್ವಾದ್ಯಂತ ನಡೆಯುತ್ತಿರುವ ಅನೇಕ ಭಯೋತ್ಪಾದಕ ಘಟನೆಗಳಲ್ಲಿ ಪಾಕಿಸ್ತಾನದ ಬೆರಳಚ್ಚುಗಳಿವೆ.
ಈ ಪವಿತ್ರ ಸಭಾಂಗಣದಲ್ಲಿ ಪಾಕ್ ಪ್ರಧಾನ ಮಂತ್ರಿ ಹೀಗೆ ಮಾತನಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಅವರ ಮಾತುಗಳು ನಮಗೆಲ್ಲರಿಗೂ ಸ್ವೀಕಾರಾರ್ಹವಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಬೇಕು. ಪಾಕಿಸ್ತಾನವು ಸತ್ಯವನ್ನು ಇನ್ನಷ್ಟು ಸುಳ್ಳಿನ ಮೂಲಕ ಎದುರಿಸಲು ಪ್ರಯತ್ನಿಸುತ್ತದೆ ಎಂದು ನಮಗೆ ತಿಳಿದಿದೆ. ನಮ್ಮ ನಿಲುವು ಸ್ಪಷ್ಟವಾಗಿದೆ ಮತ್ತು ಅದನ್ನು ಪುನರಾವರ್ತನೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಪ್ರಕ್ರಿಯೆಯ ಮೇಲೆ ಪಾಕಿಸ್ತಾನವು ನಿರಂತರವಾಗಿ ಗಡಿಯಾಚೆಗಿನ ಭಯೋತ್ಪಾದನೆ ಮೂಲಕ ತೊಂದರೆ ಕೊಟ್ಟಿದೆ. ಭಾರತದ ವಿರುದ್ಧ ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದಕ್ಕೆ ಸೂಕ್ತ ತಿರುಗೇಟು ಎದುರಿಸಬೇಕಾಗಲಿದೆ ಎಂಬುದನ್ನು ಪಾಕಿಸ್ತಾನ ಅರಿತಿರಲಿ ಎಂದೂ ಎಚ್ಚರಿಕೆ ನೀಡಿದರು.
ಜಗತ್ತಿನಾದ್ಯಂತ ಭಯೋತ್ಪಾದಕ ಕೃತ್ಯಗಳನ್ನು ಎಸಗಿದ ಉಗ್ರ ಒಸಾಮಾ ಬಿನ್ ಲಾಡೆನ್ನನ್ನು ಸಲಹಿದ, ವಿಶ್ವದಾದ್ಯಂತ ಡ್ರಜ್ಸ್ ಜಾಲ ಹರಡಲು ಕುತಂತ್ರ ಹೂಡುತ್ತಿರುವ ಪಾಕಿಸ್ತಾನದ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ. ಪಾಕ್ ಪ್ರಧಾನಿ ಹೇಳಿಕೆಗಳನ್ನು ಖಂಡಿತಾ ಒಪ್ಪಲಾಗದು. ಅವರು ವಾಸ್ತವದ ಹೇಳಿಕೆಗಳೊಂದಿಗೆ ನಮ್ಮ ಮುಂದೆ ಬರಲಿ. ನಮ್ಮ ನಿಲುವಿಗೆ ನಾವು ಬದ್ಧ ಎಂದು ಮಂಗಳಾನಂದನ್ ಹೇಳಿದರು.
ಏತನ್ಮಧ್ಯೆ, ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಮಾತನಾಡಿ, ಭಾರತದ ಸಮರ್ಥನೆಗಳನ್ನು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿವೆ ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹಲವಾರು ನಿರ್ಣಯಗಳ ಮೂಲಕ ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಸ್ವ-ನಿರ್ಣಯದ ಹಕ್ಕನ್ನು ಚಲಾಯಿಸಲು ಮುಕ್ತ, ನಿಷ್ಪಕ್ಷಪಾತ ಜನಾಭಿಪ್ರಾಯ ಸಂಗ್ರಹಣೆಗೆ ಕರೆ ನೀಡಿದೆ ಎಂದು ಹೇಳಿದರು. .
ಇದಕ್ಕೂ ಮುನ್ನ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್, ಜಮ್ಮು ಮತ್ತು ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು.
ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತ ಸರ್ಕಾರ ಆಜಾದ್ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಬೆದರಿಕೆಯನ್ನು ಹಾಕುತ್ತಿದೆ. ಭಾರತದ ಆಕ್ರಮಣದ ವಿರುದ್ಧ ಪಾಕಿಸ್ತಾನವು ನಿರ್ಣಾಯಕವಾಗಿ ಪ್ರತಿಕ್ರಿಯಿಸಲಿದೆ ಎಂದು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತೇನೆ. ಕಾಶ್ಮೀರದಲ್ಲಿ ಭಾರತವು 2019ರ ಆಗಸ್ಟ್ 5ರಲ್ಲಿ ತೆಗೆದುಕೊಂಡ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
Advertisement