
ಲಂಡನ್: ಬ್ರಿಟನ್‌ನ ಇಬ್ಬರು ಶಾಸಕರನ್ನು ಇಸ್ರೇಲ್ ಬಂಧಿಸಿ, ಅವರಿಗೆ ಪ್ರವೇಶ ನಿರಾಕರಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಶನಿವಾರ ಹೇಳಿದ್ದಾರೆ. ಆಡಳಿತಾರೂಢ ಲೇಬರ್ ಪಾರ್ಟಿಯ ಯುವಾನ್ ಯಾಂಗ್ ಮತ್ತು ಅಬ್ತಿಸಮ್ ಮೊಹಮದ್ ಲಂಡನ್‌ನಿಂದ ಇಸ್ರೇಲ್‌ಗೆ ತೆರಳಿದಾಗ ಅವರಿಗೆ ದೇಶ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಮತ್ತು ಗಡೀಪಾರು ಮಾಡಲಾಗಿದೆ ಎಂದು ಬ್ರಿಟಿಷ್ ಮಾಧ್ಯಮ ವರದಿ ಮಾಡಿದೆ.
ಇಸ್ರೇಲ್‌ಗೆ ತೆರಳಿದ ಸಂಸದೀಯ ನಿಯೋಗದಲ್ಲಿದ್ದ ಇಬ್ಬರು ಬ್ರಿಟಿಷ್ ಸಂಸದರನ್ನು ಇಸ್ರೇಲಿ ಅಧಿಕಾರಿಗಳು ಬಂಧಿಸಿದ್ದು, ಪ್ರವೇಶ ನಿರಾಕರಿಸಿದ್ದಾರೆ ಎಂಬುದನ್ನು ಒಪ್ಪಲಾಗದು, ಇದು ಪ್ರತಿಕೂಲವಾಗಿದ್ದು, ತೀವ್ರ ಕಳವಳಕಾರಿಯಾಗಿದೆ ಎಂದು ಲ್ಯಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಬ್ರಿಟಿಷ್ ಸಂಸದರು ಸರಿಯಾಗಿ ನಡೆಸಿಕೊಳ್ಳುವ ಕ್ರಮವಲ್ಲಾ ಎಂದು ಇಸ್ರೇಲ್ ಸರ್ಕಾರದ ನನ್ನ ಸಹವರ್ತಿಗಳಿಗೆ ಸ್ಪಷ್ಪಪಡಿಸುತ್ತೇನೆ. ನಮ್ಮ ಬೆಂಬಲ ನೀಡಲು ನಾವು ಇಂದು ರಾತ್ರಿ ಇಬ್ಬರೂ ಸಂಸದರನ್ನು ಸಂಪರ್ಕಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ತೆಗೆದುಕೊಂಡು ಕ್ರಮ ಆಶ್ಚರ್ಯ ಮೂಡಿಸಿದೆ ಎಂದು ಇಬ್ಬರು ಸಂಸದರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಅಧಿಕೃತ ಸಂಸದೀಯ ನಿಯೋಗದಲ್ಲಿದ್ದರು ಎಂಬ ಅವರ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ. ಅಂತಹ ಯಾವುದೇ ಅಧಿಕೃತ ನಿಯೋಗದ ಭೇಟಿ ಕುರಿತು ಅಧಿಕೃತ ಮಾಹಿತಿ ಬಂದಿರಲಿಲ್ಲ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ಭದ್ರತಾ ಪಡೆಗಳ ಕ್ರಮಗಳನ್ನು ದಾಖಲಿಸುವುದು ಮತ್ತು ಇಸ್ರೇಲ್ ವಿರುದ್ಧ ದ್ವೇಷದ ಭಾಷಣವನ್ನು ಹರಡುವುದು ಅವರ ಭೇಟಿಯ ಉದ್ದೇಶವಾಗಿತ್ತು ಎಂದು ಹೆಚ್ಚಿನ ವಿಚಾರಣೆಯಿಂದ ತಿಳಿದುಬಂದಿದೆ" ಎಂದು ಆಂತರಿಕ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.
ಈ ಘಟನೆಯು ಲ್ಯಾಮಿ ಮತ್ತು ವಿರೋಧ ಪಕ್ಷದ ಕನ್ಸರ್ವೇಟಿವ್ ನಾಯಕ ಕೆಮಿ ಬಡೆನೋಚ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಯುಕೆ ಸಂಸದರನ್ನು ಬಂಧಿಸಿರುವುದು ಆಶ್ಚರ್ಯಕರವಾಗಿಲ್ಲ ಎಂದು ಕೆಮಿ ಬಡೆನೋಚ್ ಭಾನುವಾರ ಸ್ಕೈ ನ್ಯೂಸ್‌ಗೆ ಹೇಳಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಲ್ಯಾಮಿ,
ಇಬ್ಬರು ಬ್ರಿಟಿಷ್ ಸಂಸದರನ್ನು ಬಂಧಿಸಿ ಗಡೀಪಾರು ಮಾಡಿದ್ದಕ್ಕಾಗಿ ನೀವು ಇನ್ನೊಂದು ದೇಶವನ್ನು ಹುರಿದುಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಕಳೆದ ತಿಂಗಳು ಹಮಾಸ್ ನೊಂದಿಗೆ ಹೊಸದಾದ ಮಿಲಿಟರಿ ಕಾರ್ಯಾಚರಣೆ ಆರಂಭವಾದಾಗಿನಿಂದಲೂ ಗಾಜಾಪಟ್ಟಿಯಲ್ಲಿರುವ ಪ್ರದೇಶಗಳ ವಶಕ್ಕೆ ಮುಂದಾಗಿರುವ ಇಸ್ರೇಲ್, ಇದು ಒತ್ತೆಯಾಳುಗಳ ಬಿಡುಗಡೆಯ ಕಾರ್ಯತಂತ್ರವಾಗಿದೆ ಎಂದು ಹೇಳಿದೆ.
ಕಳೆದ ತಿಂಗಳು ಇಸ್ರೇಲ್ ತೀವ್ರ ಬಾಂಬ್ ದಾಳಿಯನ್ನು ಪುನರಾರಂಭಿಸಿದಾಗಿನಿಂದ 1,249 ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆಡಳಿತದ ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಯುದ್ಧ ಪ್ರಾರಂಭವಾದಾಗಿನಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 50,609 ಕ್ಕೆ ತಲುಪಿದೆ.
Advertisement