ಭಾರತದ ದಾಳಿ ಸನ್ನಿಹಿತ, ನಮ್ಮ ಅಸ್ತಿತ್ವಕ್ಕೆ ಬೆದರಿಕೆ ಬಂದರೆ ಅಣ್ವಸ್ತ್ರ ಬಳಕೆ ಖಚಿತ: ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್

ಭಾರತದ ದಾಳಿ ಸನ್ನಿಹಿತವಾಗಿದ್ದು, ನಾವು ನಮ್ಮ ಸೇನಾಪಡೆಗಳನ್ನು ಬಲಪಡಿಸಿದ್ದೇವೆ. ಏಕೆಂದರೆ ಸೇನಾ ಸಿದ್ಧತೆ ನಮಗೂ ಅನಿವಾರ್ಯವಿದೆ. ಈ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಪಾಕಿಸ್ತಾನ ನೂತನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್
ಪಾಕಿಸ್ತಾನ ನೂತನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್
Updated on

ಇಸ್ಲಾಮಾಬಾದ್: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆಗೈದ ಭಯೋತ್ಪಾದಕ ದಾಳಿಯ ನಂತರ ಭಾರತವು ದಾಳಿಗೆ ಸಜ್ಜಾಗಿದ್ದು, ಯಾವುದೇ ಕ್ಷಣದಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಸೋಮವಾರ ಹೇಳಿದ್ದಾರೆ.

ರಾಯಿಟರ್ಸ್ ಜೊತೆ ಮಾತನಾಡಿರುವ ಅವರು, ಭಾರತದ ದಾಳಿ ಸನ್ನಿಹಿತವಾಗಿದ್ದು, ನಾವು ನಮ್ಮ ಸೇನಾಪಡೆಗಳನ್ನು ಬಲಪಡಿಸಿದ್ದೇವೆ. ಏಕೆಂದರೆ ಸೇನಾ ಸಿದ್ಧತೆ ನಮಗೂ ಅನಿವಾರ್ಯವಿದೆ. ಈ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಉಗ್ರರ ದಾಳಿ ಘಟನೆ ಬಳಿಕ ಉಭಯ ರಾಷ್ಟ್ರಗಳ ನಡುವೆ ವಾಗ್ಯುದ್ಧಗಳು ಹೆಚ್ಚಾಗಿವೆ. ಭಾರತದ ದಾಳಿಯ ಸಾಧ್ಯತೆ ಕುರಿತು ಸರ್ಕಾರಕ್ಕೆ ಸೇನೆ ಮಾಹಿತಿ ನೀಡಿದೆ. ನಮ್ಮ ಅಸ್ತಿತ್ವಕ್ಕೆ ನೇರ ಅಪಾಯ ಎದುರಾದರೆ ಮಾತ್ರ ಅಣ್ವಸ್ತ್ರ ಉಪಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.

"ಪಹಲ್ಗಾಮ್‌ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂದು ಭಾರತ ಆರೋಪಿಸುತ್ತಿದೆ. ಆದರೆ, ಈ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಭಾರತ ಈಗ ನಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಅದು ಖಂಡಿತವಾಗಿಯೂ ನಮ್ಮ ಮೇಲೆ ದಾಳಿ ಮಾಡಲಿದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ" ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಉಗ್ರರ ದಾಳಿಯ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ.

ಪಾಕಿಸ್ತಾನ ನೂತನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್
ಪಹಲ್ಗಾಮ್ ಭಯೋತ್ಪಾದಕ ದಾಳಿ: ಜವಾಬ್ದಾರಿಯುತ ಪರಿಹಾರ ಕ್ರಮ ಕೈಗೊಳ್ಳಿ; ಭಾರತ, ಪಾಕಿಸ್ತಾನಕ್ಕೆ ಅಮೆರಿಕಾ ಒತ್ತಾಯ

ಉಗ್ರರ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಪ್ರದಾನಮಂತ್ರಿ ಶೆಹಬಾಜ್ ಷರೀಫ್. ‘ತಟಸ್ಥ ಮತ್ತು ಪರಸ್ಪರ ಆರೋಪರಹಿತ ತನಿಖೆʼಗೆ ಸಿದ್ಧವಿದ್ದೇವೆಂದು ಹೇಳಿದ್ದರು.

ಪಹಲ್ಗಾಮ್‌ನಲ್ಲಿ ನಡೆದ ದುರಂತವು ನಿರಂತರವಾಗಿ ನಡೆಯುತ್ತಿರುವ ಆರೋಪದ ಆಟಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಜವಾಬ್ದಾರಿಯುತ ದೇಶವಾಗಿ ಪಾಕಿಸ್ತಾನವು ವಿಶ್ವಾಸಾರ್ಹ ತನಿಖೆಯಲ್ಲಿ ಭಾಗವಹಿಸಲು ಸಿದ್ಧವಿದೆ. ಘಟನೆಗೆ ಸಂಬಂಧಿಸಿ ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ನಡೆಸುವ ಯಾವುದೇ ತನಿಖೆಗೆ ಸಹಕರಿಸಲು ಪಾಕಿಸ್ತಾನ ಸಿದ್ಧವಿದೆ. ನಮ್ಮ ಸೈನ್ಯ ಯುದ್ಧಕ್ಕೆ ಸಿದ್ಧವಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ನಮಗಿದೆ. ಶಾಂತಿ ನಮ್ಮ ಆದ್ಯತೆ. ಆದರೆ, ಯಾರೂ ಅದನ್ನು ನಮ್ಮ ದೌರ್ಬಲ್ಯವೆಂದು ಪರಿಗಣಿಸಬಾರದು. ಭದ್ರತೆಯ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದರು.

ಇನ್ನು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ನ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ಭಾರತದ ಕ್ರಮ ಹೆಚ್ಚಾಗುತ್ತಿದ್ದಂತೆಯೇ ಪಹಲ್ಗಾಮ್ ದಾಳಿಯಲ್ಲಿ ಯಾವುದೇ ಪಾತ್ರವಿಲ್ಲ ಎಂದು ನಿರಾಕರಿಸಿತ್ತು. ಸೈಬರ್ ಹ್ಯಾಕ್ ನಡೆದಿದ್ದು, ದಾಳಿ ಹೊಣೆ ಹೊತ್ತುಕೊಂಡಿದ್ದೇವೆಂದು ಪೋಸ್ಟ್ ಮಾಡಲಾಗಿದೆ ಎಂದು ಹೇಳಿತ್ತು.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮನ್ ಕಿ ಬಾತ್ ನಲ್ಲಿ ಉಗ್ರರ ದಾಳಿ ಕುರಿತು ಮಾತನಾಡಿದ್ದ ಪ್ರಧಾನಿ ಮೋದಿಯವರು, ದಾಳಿ ನಡೆಸಿದವರು ಹಾಗೂ ಪಿತೂರಿ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್ ಮಾಡಿದ್ದ ಮೋದಿಯವರು, ಉಗ್ರರನ್ನು ಬಿಡುವುದಿಲ್ಲ, ಅವರ ದುಷ್ಚ ಕಾರ್ಯಗಳು ಎಂದಿಗೂ ಯಶಸ್ವಿಯಾಗಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲವಾಗಿದ್ದು, ಅದು ಮತ್ತಷ್ಟು ಬಲಗೊಳ್ಳುತ್ತದೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com