
ನ್ಯೂಯಾರ್ಕ್: ಭಾರತದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಡೊನಾಲ್ಡ್ ಟ್ರಂಪ್ ಶೇ 50ರಷ್ಟು ಸುಂಕು ವಿಧಿಸಿರುವುದರ ಬೆನ್ನಲ್ಲೇ, ಅಮೆರಿಕದ ಇಂಡಿಯಾನಾ ನಗರದಲ್ಲಿನ ಹಿಂದೂ ದೇವಾಲಯದ ಫಲಕವನ್ನು ವಿರೂಪಗೊಳಿಸಲಾಗಿದೆ. ಈ ಘಟನೆಯನ್ನು ಭಾರತೀಯ ದೂತವಾಸ ಖಂಡಿಸಿದೆ.
ಗ್ರೀನ್‌ವುಡ್ ನಗರದ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದಲ್ಲಿ 'ದ್ವೇಷಪೂರಿತ ಕೃತ್ಯ' ನಡೆದಿದೆ ಎಂದು ದೇವಾಲಯದ ಅಧಿಕೃತ ಸಾರ್ವಜನಿಕ ವ್ಯವಹಾರಗಳ ಖಾತೆಯು ಮಂಗಳವಾರ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ BAPS ದೇವಾಲಯವನ್ನು ನಾಲ್ಕು ಬಾರಿ ಗುರಿಯಾಗಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.
'ಇಂಡಿಯಾನಾದ ಗ್ರೀನ್‌ವುಡ್‌ನಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯದ ಮುಖ್ಯ ನಾಮಫಲಕವನ್ನು ಅಪವಿತ್ರಗೊಳಿಸಿರುವುದು ಖಂಡನೀಯ. ತ್ವರಿತ ಕ್ರಮಕ್ಕಾಗಿ' ಕಾನೂನು ಜಾರಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ' ಎಂದು ಚಿಕಾಗೋದಲ್ಲಿರುವ ಭಾರತೀಯ ದೂತವಾಸವು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಕಾನ್ಸುಲ್ ಜನರಲ್, ಭಕ್ತರು ಮತ್ತು ಗ್ರೀನ್‌ವುಡ್ ಮೇಯರ್ ಸೇರಿದಂತೆ ಸ್ಥಳೀಯ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, 'ಏಕತೆ ಮತ್ತು ಒಗ್ಗಟ್ಟಿಗಾಗಿ ಮತ್ತು ಅಲ್ಲಿ ದುಷ್ಕರ್ಮಿಗಳ ವಿರುದ್ಧ ಜಾಗರೂಕತೆಗಾಗಿ ಕರೆ ನೀಡಿದರು' ಎಂದು ಅದು ಹೇಳಿದೆ.
'ಈ ಕೃತ್ಯವು ನಮ್ಮ ಸಮುದಾಯದ ಸಂಕಲ್ಪವನ್ನು ಬಲಪಡಿಸಿದೆ ಮತ್ತು ಧಾರ್ಮಿಕ ವಿರೋಧಿ ವರ್ತನೆ ವಿರುದ್ಧ ನಮ್ಮ ನಿಲುವಿನಲ್ಲಿ ನಾವು ಒಗ್ಗಟ್ಟಿನಿಂದ ಇದ್ದೇವೆ' ಎಂದು ದೇವಾಲಯ ಆಡಳಿತ ಮಂಡಳಿ ಹೇಳಿದೆ.
ಮಾರ್ಚ್‌ನಲ್ಲಿ, ಅಮೆರಿಕದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಕ್ಯಾಲಿಫೋರ್ನಿಯಾದ ಬಿಎಪಿಎಸ್ ಹಿಂದೂ ದೇವಾಲಯವನ್ನು ಅಪರಿಚಿತ ವ್ಯಕ್ತಿ ಅಪವಿತ್ರಗೊಳಿಸಿದ್ದರು.
Advertisement