
ರಷ್ಯಾದೊಂದಿಗೆ ತೈಲ ವ್ಯಾಪಾರವನ್ನು ನಿಲ್ಲಿಸಲು ಹಾಕುತ್ತಿರುವ ಒತ್ತಡಗಳಿಗೆ ಮಣಿಯದ ಭಾರತದ ನಡೆಯಿಂದ ಅಮೆರಿಕ ಮತ್ತಷ್ಟು ಕೆರಳಿದೆ. ಭಾರತದ ವಿದೇಶಾಂಗ ನೀತಿಯ ನಿರ್ವಹಣೆಯಿಂದ ಹತಾಶೆಗೊಳಗಾಗಿರುವ ಅಮೆರಿಕ ಈಗ ಭಾರತಕ್ಕೆ ನೇರಾ ನೇರ ಬೆದರಿಕೆಯೊಡ್ಡತೊಡಗಿದೆ.
ಭಾರತ ತನ್ನ ರಷ್ಯಾದ ಕಚ್ಚಾ ತೈಲ ವ್ಯಾಪಾರವನ್ನು ನಿಲ್ಲಿಸಿದೇ ಇದ್ದಲ್ಲಿ, ಅಮೆರಿಕದ ಅಧ್ಯಕ್ಷರು ಭಾರತದ ಆಮದುಗಳ ಮೇಲಿನ ದಂಡನಾತ್ಮಕ ಸುಂಕಗಳ ಬಗ್ಗೆ ತಮ್ಮ ನಿಲುವನ್ನು ಸಡಿಲಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅವರ ಉನ್ನತ ಆರ್ಥಿಕ ಸಲಹೆಗಾರ ಎಚ್ಚರಿಸಿದ್ದಾರೆ. ಅಮೆರಿಕದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಈ ಎಚ್ಚರಿಕೆ ನೀಡಿದ್ದು, ಭಾರತ ತನ್ನ ಮಾರುಕಟ್ಟೆಗಳನ್ನು ಅಮೇರಿಕನ್ ಉತ್ಪನ್ನಗಳಿಗೆ ತೆರೆಯುವಲ್ಲಿ "ನಿಷ್ಠುರತೆ" ಹೊಂದಿದೆ ಎಂದು ಆರೋಪಿಸಿದ್ದು, ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳನ್ನು "ಜಟಿಲ" ಎಂದು ಕರೆದಿದ್ದಾರೆ.
"ಭಾರತೀಯರು ಬಗ್ಗದಿದ್ದರೆ, ಅಧ್ಯಕ್ಷ ಟ್ರಂಪ್ ಕೂಡಾ ತಮ್ಮ ನಿಲುವು ಸಡಿಲಗೊಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು. ಬುಧವಾರ ಅಮೆರಿಕ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 50ಕ್ಕೆ ದ್ವಿಗುಣಗೊಳಿಸಿದೆ. ಇದು ಬ್ರೆಜಿಲ್ ಹೊರತುಪಡಿಸಿ ಬೇರೆ ಯಾವುದೇ ದೇಶಕ್ಕೆ ವಿಧಿಸಲಾಗಿರುವ ಅತ್ಯಧಿಕ ಸುಂಕವಾಗಿದೆ. ಇದರಲ್ಲಿ ಭಾರತ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದಕ್ಕೆ ವಿಧಿಸಲಾಗಿರುವ ಶೇ.25 ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ.
ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳು "ಜಟಿಲವಾಗಿವೆ" ಎಂದು ಹ್ಯಾಸೆಟ್ ಹೇಳಿದ್ದು, ಅದರ ಒಂದು ಭಾಗ "ಶಾಂತಿ ಒಪ್ಪಂದವನ್ನು ಪಡೆಯಲು ಮತ್ತು ಲಕ್ಷಾಂತರ ಜೀವಗಳನ್ನು ಉಳಿಸಲು ನಾವು ರಷ್ಯಾದ ಮೇಲೆ ಹಾಕಲು ಪ್ರಯತ್ನಿಸುತ್ತಿರುವ ಒತ್ತಡಕ್ಕೆ ಸಂಬಂಧಿಸಿದೆ" ಎಂದು ಅಮೆರಿಕ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತು ನಂತರ ನಮ್ಮ ಉತ್ಪನ್ನಗಳಿಗೆ ತಮ್ಮ ಮಾರುಕಟ್ಟೆಗಳನ್ನು ತೆರೆಯುವ ಬಗ್ಗೆ ಭಾರತ ನಿಷ್ಠುರತೆ ಹೊಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ"
ಭಾರತ-ಯುಎಸ್ ವ್ಯಾಪಾರ ಮಾತುಕತೆಗಳನ್ನು ಮ್ಯಾರಥಾನ್‌ಗೆ ಜೋಡಿಸುತ್ತಾ, ನವದೆಹಲಿ ಮತ್ತು ವಾಷಿಂಗ್ಟನ್ ಅಂತಿಮ ಸ್ಥಾನವನ್ನು ತಲುಪುವ ಮೊದಲು ಮಾತುಕತೆಗಳಿಗೆ ದೀರ್ಘಾವಧಿಯ ದೃಷ್ಟಿಕೋನ ಮತ್ತು "ಏರಿಳಿತ" ಗಳನ್ನು ಸ್ವೀಕರಿಸುವ ಅಗತ್ಯವಿದೆ ಎಂದು ಹ್ಯಾಸೆಟ್ ಹೇಳಿದ್ದಾರೆ.
"ನೀವು ವ್ಯಾಪಾರ ಮಾತುಕತೆಗಳನ್ನು ನೋಡಿದಾಗ, ನಾವೆಲ್ಲರೂ ಕಲಿತ ಒಂದು ಪಾಠವೆಂದರೆ ನೀವು ಭವಿಷ್ಯದೆಡೆಗೆ ಗಮನ ಕೇಂದ್ರೀಕರಿಸಬೇಕು ಮತ್ತು ನಾವು ಅಂತಿಮ ಸ್ಥಾನವನ್ನು ತಲುಪುವ ಮೊದಲು ಏರಿಳಿತಗಳು ಉಂಟಾಗಲಿವೆ ಎಂಬುದನ್ನು ಗುರುತಿಸಬೇಕು" ಎಂದು ಅವರು ಹೇಳಿದ್ದಾರೆ.
Advertisement