

ಇಸ್ಲಾಮಾಬಾದ್: ವಿಭಜನೆಯ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಎರಡು ವಿಶ್ವವಿದ್ಯಾಲಯಗಳು ಸಂಸ್ಕೃತ ಕೋರ್ಸ್ ಆರಂಭಿಸಿವೆ. ವಿಭಜನೆಯ ಪರಂಪರೆ ಉಲ್ಲೇಖಿಸಿ ಪಂಜಾಬ್‌ನ ಎರಡು ವಿಶ್ವವಿದ್ಯಾನಿಲಯಗಳು ಸಂಸ್ಕೃತದಲ್ಲಿ ಕಿರು ಕೋರ್ಸ್‌ಗಳನ್ನು ಪ್ರಾರಂಭಿಸಿದ್ದು, ಭವಿಷ್ಯದಲ್ಲಿ ಭಗವದ್ಗೀತೆ ಮತ್ತು ಮಹಾಭಾರತವನ್ನು ಕಲಿಸಲು ಯೋಜಿಸಿವೆ.
ಪಂಜಾಬ್ ಲಾಹೋರ್ ವಿಶ್ವವಿದ್ಯಾಲಯ (ಸಾರ್ವಜನಿಕ) ಮತ್ತು ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (ಖಾಸಗಿ) ಈ ಶಾಸ್ತ್ರೀಯ ಭಾಷೆಯಲ್ಲಿ ಮೂರು ತಿಂಗಳ ಕೋರ್ಸ್ ಅನ್ನು ಪ್ರಾರಂಭಿಸಿವೆ. ಸಂಶೋಧನೆಗಾಗಿ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತದ ಹಸ್ತಪ್ರತಿಗಳ ಸಂಗ್ರಹ ಕಾರ್ಯವನ್ನು ಬೋಧಕರು ಮಾಡುತ್ತಿದ್ದಾರೆ. ಕಳೆದ ವರ್ಷ ಅಲ್ಪಾವಧಿಯ ಕೋರ್ಸ್‌ಗಳಿಗೆ ಸಿದ್ಧತೆ ಪ್ರಾರಂಭವಾಗಿತ್ತು. 2025 ರಲ್ಲಿ ಮೊದಲ ಕೋರ್ಸ್‌ಗೆ ಪ್ರವೇಶ ಮಾಡಿಕೊಳ್ಳಲಾಗಿದೆ.
ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್‌ಮೆಂಟ್ ಸೈನ್ಸಸ್ (LUMS) ಮೊದಲ ಹಂತಗಳಲ್ಲಿ I ಮತ್ತು II ಅನ್ನು ಪ್ರಾರಂಭಿಸಿತು ಮತ್ತು ನಂತರ ಪಂಜಾಬ್ ವಿಶ್ವವಿದ್ಯಾಲಯ ಲಾಹೋರ್ ಸಂಸ್ಕೃತ ಕೋರ್ಸ್ ಆರಂಭಿಸಿತು ಎಂದು ಪಂಜಾಬ್ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರೊ. ಡಾ ಅಶೋಕ್ ಕುಮಾರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕೋರ್ಸ್ ಆರಂಭದಲ್ಲಿ ಸಂಸ್ಕೃತ ಕುರಿತು ಬೇಸಿಕ್ ಶಿಕ್ಷಣ ನೀಡಲಾಗುವುದು, ಭಾಷೆ ಮೇಲೆ ಹಿಡಿತ ಹೊಂದಲುವಿದ್ಯಾರ್ಥಿಯು ಏಳು ಹಂತಗಳನ್ನು ಪೂರ್ಣಗೊಳಿಸಬೇಕು. ಅದಕ್ಕೆ ಕನಿಷ್ಠ ಮೂರು ವರ್ಷಗಳ ಅಗತ್ಯವಿದೆ ಎಂದು ಕುಮಾರ್ ಹೇಳಿದರು.
ಸಂಸ್ಕೃತವನ್ನು ಅರ್ಥಮಾಡಿಕೊಳ್ಳಲು ಮೂರು ವರ್ಷಗಳ ಪೂರ್ಣ ಪ್ರಮಾಣದ ಕೋರ್ಸ್ ಪ್ರಾರಂಭವಾಗಬಹುದೇ ಎಂಬುದನ್ನು ಕಾದು ನೋಡಬೇಕು. ಮೂರು ವರ್ಷಗಳ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳು ಭಗವದ್ಗೀತೆ ಮತ್ತು ಮಹಾಭಾರತವನ್ನು ಕಲಿಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಈ ವಿಶ್ವವಿದ್ಯಾಲಯಗಳು ಸಂಸ್ಕೃತ ಕೋರ್ಸ್ ಪ್ರಾರಂಭಿಸುವ ಅಗತ್ಯವೇನಿತ್ತು ಎಂದು ಪ್ರಶ್ನೆಗೆ ಉತ್ತರಿಸಿದ ಕುಮಾರ್, 1947 ರಲ್ಲಿ ವಿಭಜನೆಯ ನಂತರ, ಈ ಶಾಸ್ತ್ರೀಯ ಭಾಷೆಯನ್ನು ಬಲ್ಲವರೆಲ್ಲರೂ ಭಾರತಕ್ಕೆ ಹೋದಂತೆ ಇಲ್ಲಿ ಯಾರೂ ಇರಲಿಲ್ಲ. ಪಂಜಾಬ್ ವಿಶ್ವವಿದ್ಯಾಲಯವು ಸಂಸ್ಕೃತದ ಅಪಾರ ಸಾಹಿತ್ಯವನ್ನು ಹೊಂದಿರುವುದರಿಂದ, ನಮ್ಮ ಹೊಸ ಡೀನ್ ಇದನ್ನು ಪರಿಚಯಿಸಲು ನಿರ್ಧರಿಸಿದರು ಎಂದು ಅವರು ತಿಳಿಸಿದರು.
ಪಂಜಾಬ್ ವಿಶ್ವವಿದ್ಯಾನಿಲಯದ ಗ್ರಂಥಾಲಯ ಅಪಾರ ಸಾಹಿತ್ಯ ಭಂಡಾರ ಹೊಂದಿದೆ. ಆದರೆ ಸಂಸ್ಕೃತ ಓದುವವರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಇಲ್ಲಿಯವರೆಗೆ ಯಾವುದೇ ಸ್ಥಳೀಯರು ಇದನ್ನು ಬಳಸುತ್ತಿಲ್ಲ. ಮೂವರು ವಿದ್ಯಾರ್ಥಿಗಳು ಪ್ರಸ್ತುತ ಪಂಜಾಬ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿದ್ದಾರೆ. LUMS ನಲ್ಲಿ ಎಂಟು ವಿದ್ಯಾರ್ಥಿಗಳು ಸಂಸ್ಕೃತಕ್ಕೆ ದಾಖಲಾಗಿದ್ದಾರೆ. ಇವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದು, ಭಾಷೆಯ ಕಲಿಕೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ ಎಂದು ಕುಮಾರ್ ಹೇಳಿದರು.
Advertisement