ಮೋದಿ-ಟ್ರಂಪ್ ಮಾತುಕತೆ: ಭಾರತಕ್ಕೆ F-35 ಯುದ್ಧ ವಿಮಾನ ಪೂರೈಕೆಗೆ ಅಮೆರಿಕಾ ಒಪ್ಪಿಗೆ, ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಮುಂದು

ಈ ವರ್ಷದಿಂದ, ನಾವು ಭಾರತಕ್ಕೆ ಮಿಲಿಟರಿ ಮಾರಾಟವನ್ನು ಹಲವು ಶತಕೋಟಿ ಡಾಲರ್‌ಗಳಷ್ಟು ಹೆಚ್ಚಿಸುತ್ತೇವೆ ಎಂದು ಟ್ರಂಪ್ ಹೇಳಿದರು.
Narendra Modi-Donald Trump
ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯ ನಂತರ, ವ್ಯಾಪಾರ ಕೊರತೆಯನ್ನು ತಗ್ಗಿಸಲು ಭಾರತವು ಅಮೆರಿಕದಿಂದ ಹೆಚ್ಚಿನ ತೈಲ, ಅನಿಲ ಮತ್ತು ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು, ಆದರೆ ಅಮೆರಿಕಾ ಭಾರತದ ಮೇಲೆ ವ್ಯಾಪಾರದಲ್ಲಿ ಸುಂಕ ಹೇರುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದರು.

ನಿನ್ನೆ ಗುರುವಾರ (ಭಾರತದ ಸಮಯ ಪ್ರಕಾರ ಇಂದು ನಸುಕಿನ ಜಾವ ಶುಕ್ರವಾರ) ಶ್ವೇತಭವನದಲ್ಲಿರುವ ತಮ್ಮ ಓವಲ್ ಕಚೇರಿಯಲ್ಲಿ, ಟ್ರಂಪ್ ಮೋದಿ ಅವರನ್ನು ಹಸ್ತಾಲಾಘವ ನೀಡಿ ಅಪ್ಪುಗೆಯೊಂದಿಗೆ ಸ್ವಾಗತಿಸಿ ಪ್ರಧಾನಿ ಮೋದಿ ತಮ್ಮ ದೀರ್ಘಕಾಲದ ಸ್ನೇಹಿತ ಮತ್ತು ಅದ್ಭುತ ವ್ಯಕ್ತಿ ಎಂದು ಬಣ್ಣಿಸಿದರು.

ಉಭಯ ನಾಯಕರು ಮಾತುಕತೆಯ ನಂತರ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷರು, ಎರಡೂ ಕಡೆಯಿಂದಲೂ ಶೀಘ್ರದಲ್ಲೇ ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ನೋಡುತ್ತಿದ್ದಾರೆ. ಕೆಲವು ಅಮೆರಿಕನ್ ಉತ್ಪನ್ನಗಳ ಮೇಲೆ ಭಾರತ ವಿಧಿಸಿರುವ ಆಮದು ಸುಂಕಗಳನ್ನು ತೀರಾ ಅನ್ಯಾಯದ ಕಠಿಣ ಕ್ರಮ ಎಂದು ಕರೆದರು.

ಭಾರತ ಏನೇ ವಿಧಿಸಿದರೂ, ನಾವು ಅವುಗಳಿಗೆ ಶುಲ್ಕ ವಿಧಿಸುತ್ತೇವೆ. ಆದರೂ ಭಾರತದೊಂದಿಗೆ ಸಂಬಂಧ ಮುಂದುವರಿಸಲು ನೋಡುತ್ತಿದ್ದೇವೆ ಎಂದರು.

ಅಮೆರಿಕ ಅಧ್ಯಕ್ಷರು ತಮ್ಮ ಆಡಳಿತವು ಆರಂಭಿಸಿದ ಇಂತಹ ಕ್ರಮಗಳ ಸರಣಿಯಲ್ಲಿ ಇತ್ತೀಚಿನದಾಗಿ ಅಮೆರಿಕದ ಎಲ್ಲಾ ವ್ಯಾಪಾರ ಪಾಲುದಾರರಿಗೆ ಹೊಸ ಪರಸ್ಪರ ಸುಂಕ ನೀತಿಯನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಮೋದಿ ಅಮೆರಿಕ ಭೇಟಿ ಕೈಗೊಂಡಿದ್ದಾರೆ.

ತಮ್ಮ ಹೇಳಿಕೆಗಳಲ್ಲಿ, ಟ್ರಂಪ್ ಮತ್ತು ಪ್ರಧಾನಿ ಮೋದಿ ಅವರು ಅಮೆರಿಕವನ್ನು ಭಾರತಕ್ಕೆ ತೈಲ ಮತ್ತು ಅನಿಲದ ನಂಬರ್ ಒನ್ ಪೂರೈಕೆದಾರವನ್ನಾಗಿ ಮಾಡುವ ಒಪ್ಪಂದಕ್ಕೆ ಬಂದಿದ್ದಾರೆ ಎಂದು ಹೇಳಿದರು, ಇದು ಸುಮಾರು 45 ಬಿಲಿಯನ್ ಯುಎಸ್ ಡಾಲರ್‌ಗಳಷ್ಟಿರುವ ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವ ಕ್ರಮಗಳ ಭಾಗವಾಗಿರಬೇಕೆಂದು ಸೂಚಿಸಿದರು.ಒಟ್ಟಾರೆ ರಕ್ಷಣಾ ಪಾಲುದಾರಿಕೆಯನ್ನು ವಿಸ್ತರಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಈ ವರ್ಷದಿಂದ, ನಾವು ಭಾರತಕ್ಕೆ ಮಿಲಿಟರಿ ಮಾರಾಟವನ್ನು ಹಲವು ಶತಕೋಟಿ ಡಾಲರ್‌ಗಳಷ್ಟು ಹೆಚ್ಚಿಸುತ್ತೇವೆ ಎಂದು ಟ್ರಂಪ್ ಹೇಳಿದರು.

Narendra Modi-Donald Trump
ಭಾರತಕ್ಕೆ ಗೆಲುವು: 26/11 ದಾಳಿಯ ಆರೋಪಿ ತಹವ್ವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕಾ ಒಪ್ಪಿಗೆ; Donald Trump ಘೋಷಣೆ

ಎಫ್ -35 ಜೆಟ್

ಭಾರತಕ್ಕೆ ಎಫ್ -35 ಸ್ಟೆಲ್ತ್ ಯುದ್ಧ ವಿಮಾನಗಳನ್ನು ಒದಗಿಸಲು ನಾವು ದಾರಿ ಮಾಡಿಕೊಡುತ್ತಿದ್ದೇವೆ. ಎಫ್ 35 ಜೆಟ್‌ಗಳನ್ನು ವಿಶ್ವದ ಅತ್ಯಂತ ಮಾರಕ, ಬದುಕುಳಿಯಬಹುದಾದ ಮತ್ತು ಸಂಪರ್ಕಿತ ಯುದ್ಧ ವಿಮಾನಗಳು ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತದ ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ಭಾರತ ಮತ್ತು ಅಮೆರಿಕ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಿಷ್ಠವಾಗಿ ಕೆಲಸ ಮಾಡುತ್ತದೆ ಎಂದರು.

ಭಾರತ ಶಾಂತಿಯ ಪರವಾಗಿದೆ

ರಷ್ಯಾ-ಉಕ್ರೇನ್ ಸಂಘರ್ಷದ ಕುರಿತ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಕೂಡ ಉತ್ತರಿಸಿದರು. ಯುದ್ಧವನ್ನು ಕೊನೆಗೊಳಿಸಲು ಸಂಭವನೀಯ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ ಅವರ ಪ್ರಯತ್ನಗಳನ್ನು ನಾನು ಬೆಂಬಲಿಸುತ್ತೇನೆ. ಯುದ್ಧದ ಸಮಯದಲ್ಲಿ ಭಾರತ ತಟಸ್ಥವಾಗಿದೆ ಎಂದು ಜಗತ್ತು ಹೇಗೋ ಭಾವಿಸುತ್ತದೆ. ಆದರೆ ಭಾರತ ತಟಸ್ಥವಾಗಿಲ್ಲ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ವಾಸ್ತವವಾಗಿ, ಭಾರತ ಶಾಂತಿಯ ಪರವಾಗಿದೆ ಎಂದು ಮೋದಿ ಹೇಳಿದರು.

ನಾನು ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾದಾಗ, ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದೆ. ಯುದ್ಧಭೂಮಿಯಲ್ಲಿ ಪರಿಹಾರಗಳನ್ನು ಕಂಡುಹಿಡಿಯಲಾಗುವುದಿಲ್ಲ ಎಂದು ನಾನು ಹೇಳಿದ್ದೆ. ಈ ಬಗ್ಗೆ ಎಲ್ಲಾ ದೇಶಗಳು ಒಟ್ಟಿಗೆ ಕುಳಿತು ಮಾತುಕತೆಯಾಡಿ ಸಮಸ್ಯೆ ಬಗೆಹರಿಸಬೇಕು ಎಂದರು.

ಮಹತ್ವಾಕಾಂಕ್ಷೆಯ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತು, ಜಾಗತಿಕವಾಗಿ ಇತಿಹಾಸದಲ್ಲಿ ಶ್ರೇಷ್ಠ ವ್ಯಾಪಾರ ಮಾರ್ಗಗಳಲ್ಲಿ ಒಂದನ್ನು ನಿರ್ಮಿಸಲು ಸಹಾಯ ಮಾಡಲು ಎರಡೂ ಕಡೆಯವರು ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಅವರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ಮೋದಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಜ್, ರಾಷ್ಟ್ರೀಯ ಗುಪ್ತಚರ ನಿರ್ದೇಶಕ ತುಳಸಿ ಗಬ್ಬಾರ್ಡ್, ಬಿಲಿಯನೇರ್ ಎಲೋನ್ ಮಸ್ಕ್ ಮತ್ತು ರಿಪಬ್ಲಿಕನ್ ನಾಯಕ ವಿವೇಕ್ ರಾಮಸ್ವಾಮಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com