
ಇಸ್ಲಾಮಬಾದ್: ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JEM)ಮುಖ್ಯಸ್ಥ ಮಸೂದ್ ಅಜರ್ ಎಲ್ಲಿದ್ದಾನೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಿಲ್ಲ. ಆತ ಪಾಕ್ ನೆಲದಲ್ಲಿಯೇ ಇದ್ದಾನೆ ಎಂಬುದಕ್ಕೆ ಭಾರತ ವಿಶ್ವಾಸಾರ್ಹ ಪುರಾವೆ ನೀಡಿದರೆ ದೇಶ ಆತನನ್ನು ಬಂಧಿಸುತ್ತದೆ ಎಂದು ಪಾಕಿಸ್ತಾನ ಪೀಫಲ್ಸ್ ಪಾರ್ಟಿ (PPP)ನಾಯಕ ಬಿಲಾವಲ್ ಭುಟ್ಟೊ ಝರ್ಧಾರಿ ಹೇಳಿದ್ದಾರೆ.
ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭುಟ್ಟೊ ಅಪ್ಘಾನ್ ಜಿಹಾದಿಯಲ್ಲಿ ಅಜಾರ್ ತೊಡಗಿಸಿಕೊಂಡಿರುವುದನ್ನು ಗಮನಿಸಿದರೆ, ಆತ ಅಫ್ಘಾನಿಸ್ತಾನದಲ್ಲಿರಬಹುದು ಎಂಬುದು ಪಾಕಿಸ್ತಾನದ ನಂಬಿಕೆಯಾಗಿದೆ ಎಂದಿದ್ದಾರೆ.
ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿರುವುದನ್ನು ಉಲ್ಲೇಖಿಸಿ ಮಾತನಾಡಿದ ಭುಟ್ಟೋ, NATO ಮಾಡಲಾಗದ್ದನ್ನು ಪಾಕಿಸ್ತಾನ ಮಾಡಲು ಸಾಧ್ಯವಿಲ್ಲ. ಕಾಳಜಿಯುಳ್ಳ ಯಾರಾದರೂ ಸಕ್ರಿಯರಾಗಬೇಕೆಂದು ನಾವು ಬಯಸುವುದಕ್ಕೆ ಯಾವುದೇ ಕಾರಣವಿಲ್ಲ ಎಂದರು.
ಅಜಾರ್ ಪಾಕಿಸ್ತಾನದ ನೆಲದಲ್ಲಿದ್ದಾನೆ ಎಂಬುದಕ್ಕೆ ಭಾರತ ಸರ್ಕಾರ ಸೂಕ್ತ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಆತನನ್ನು ಬಂಧಿಸಲು ನಮಗೆ ಹೆಚ್ಚಿನ ಸಂತೋಷವಾಗುತ್ತದೆ. ಇಲ್ಲಿಯವರೆಗೂ ನವದೆಹಲಿ ಈ ರೀತಿಯ ಯಾವುದೇ ಕೆಲಸ ಮಾಡಿಲ್ಲ ಎಂದು ಅವರು ಹೇಳಿದರು.
ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಅಜರ್, 2001 ರ ಸಂಸತ್ ದಾಳಿ, 26/11 ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳೊಂದಿಗೆ ಸಂಬಂಧ ಹೊಂದಿದ್ದಾನೆ.
2019ರಲ್ಲಿ ಆತನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿತ್ತು. ಕಂದಹಾರ್ ವಿಮಾನ ಅಪಹರಣದ ಭಾಗವಾಗಿ 1999ರಲ್ಲಿ ಆತನನ್ನು ಭಾರತದಿಂದ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿತ್ತು. ಕ್ರಮ ಕೈಗೊಳ್ಳಲು ಪಾಕಿಸ್ತಾನ ಯಾಕೆ ಭಾರತವನ್ನು ಕಾಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ, ಭುಟ್ಟೋ, ಅಂತಾರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಹಕಾರದ ಅಂಶವನ್ನು ಉಲ್ಲೇಖಿಸಿದರು. ಅಲ್ಲಿ ದೇಶಗಳು ಶಂಕಿತರ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ ಎಂದು ಅವರು ಹೇಳಿದರು.
ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಸ್ವತಂತ್ರವಾಗಿ ಓಡಾಡುತ್ತಿದ್ದಾನೆ ಎಂಬ ನ್ಯೂಯಾರ್ಕ್ ಟೈಮ್ಸ್ ವರದಿಗೆ ಪ್ರತಿಕ್ರಿಯಿಸಿದ ಭುಟೋ,"ಇದು ವಾಸ್ತವಿಕವಾಗಿ ಸರಿಯಲ್ಲ. ಹಫೀಜ್ ಸಯೀದ್ ಪಾಕ್ ವಶದಲ್ಲಿದ್ದಾನೆ" ಎಂದು ಭುಟ್ಟೊ ಹೇಳಿದರು.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಮೇ 7 ರಂದು ಭಾರತ ಆರಂಭಿಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಹಿನ್ನೆಲೆಯಲ್ಲಿ ಬಿಲಾವಲ್ ಭುಟ್ಟೋ ಈ ಹೇಳಿಕೆ ನೀಡಿದ್ದಾರೆ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ದಾಳಿಯಲ್ಲಿ ತನ್ನ ಕುಟುಂಬದ ಹತ್ತು ಮಂದಿ ಮತ್ತು ನಾಲ್ವರು ಸಹಾಯಕರು ಸಾವನ್ನಪ್ಪಿದ್ದಾರೆ ಎಂದು ಮಸೂದ್ ಅಜರ್ ಹೇಳಿಕೊಂಡಿದ್ದಾನೆ.
Advertisement