
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಝರ್ದಾರಿ, ಜಾಗತಿಕ ಉಗ್ರ ಹಫೀಜ್ ಸಯೀದ್ ಪುತ್ರನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರಂತಹ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಲು ತಮ್ಮ ದೇಶಕ್ಕೆ ಯಾವುದೇ ಅಭ್ಯಂತರವಿಲ್ಲ ಎಂಬ ಅವರ ಹೇಳಿಕೆಗೆ ಹಫೀಜ್ ಸಯೀದ್ ಪುತ್ರನನ್ನು ಕೆರಳಿಸಿದೆ. ಭುಟ್ಟೊ ಹೇಳಿಕೆ ಜಾಗತಿಕವಾಗಿ ಪಾಕಿಸ್ತಾನಕ್ಕೆ ಕಳಂಕ ತಂದಿದೆ ಎಂದು ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್ ಕಿಡಿಕಾರಿದ್ದಾನೆ.
ಭಾರತ ಸೂಕ್ತ ದಾಖಲೆ ತೋರಿಸಿದರೆ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ಬಿಲಾವಲ್ ಭುಟ್ಟೊ ಶುಕ್ರವಾರ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಅಜರ್, 2001 ರ ಸಂಸತ್ ದಾಳಿ, 26/11 ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳೊಂದಿಗೆ ಸಂಬಂಧ ಹೊಂದಿದ್ದಾನೆ.
ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JEM)ಮುಖ್ಯಸ್ಥ ಮಸೂದ್ ಅಜರ್ ಎಲ್ಲಿದ್ದಾನೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಿಲ್ಲ. ಆತ ಪಾಕ್ ನೆಲದಲ್ಲಿಯೇ ಇದ್ದಾನೆ ಎಂಬುದಕ್ಕೆ ಭಾರತ ವಿಶ್ವಾಸಾರ್ಹ ಪುರಾವೆ ನೀಡಿದರೆ ಆತನನ್ನು ದೇಶ ಬಂಧಿಸುತ್ತದೆ ಎಂಬ ಬಿಲಾವಲ್ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿರುವ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್, ಪಿಪಿಪಿ ನಾಯಕ ಇಂತಹ ಹೇಳಿಕೆ ನೀಡಬಾರದಿತ್ತು ಎಂದಿದ್ದಾರೆ.
ಹಫೀಜ್ ಸಯೀದ್ ನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಅವರ ಹೇಳಿಕೆಯು ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಕಳಂಕ ತಂದಿದೆ ಎಂದು ಅವರು ಹೇಳಿದ್ದಾರೆ. ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಆತನ ಕುಟುಂಬ ಮತ್ತು ಇತರರು ತೀವ್ರವಾಗಿ ವಿರೋಧಿಸುವುದಾಗಿ ಜಾಗತಿಕ ಭಯೋತ್ಪಾದಕನೂ ಆಗಿರುವ ತಲ್ಹಾ ಸಯೀದ್ ಹೇಳಿದ್ದಾನೆ.
Advertisement