
ಮುಂಬೈ: ಭಾರತ ಮೂಲದ ಖ್ಯಾತ ಹಾಸ್ಯನಟ ಕಪಿಲ್ ಶರ್ಮಾ ಕೆನಡಾದಲ್ಲಿ ನೂತನವಾಗಿ ತೆರೆದಿರುವ Kap's Cafe ಕೆಫೆ ಮೇಲೆ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹಾಸ್ಯನಟ ಕಪಿಲ್ ಶರ್ಮಾಗೆ ಬೆದರಿಕೆ ಹಾಕಿದ್ದಾನೆ.
ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (SFJ) ಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ನಟ-ಹಾಸ್ಯನಟ ಕಪಿಲ್ ಶರ್ಮಾಗೆ ಈ ಬೆದರಿಕೆ ಹಾಕಿದ್ದು, "ಕೆನಡಾ ನಿನ್ನ ಆಟದ ಮೈದಾನವಲ್ಲ" ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ "ರಕ್ತದ ಹಣವನ್ನು ಹಿಂದೂಸ್ತಾನಕ್ಕೆ ಹಿಂತಿರುಗಿಸುವುದಾಗಿ" ಬೆದರಿಕೆ ಹಾಕಿದ್ದಾನೆ.
'ಕೆನಡಾ ನಿಮ್ಮ ಆಟದ ಮೈದಾನವಲ್ಲ. ನಿಮ್ಮ ರಕ್ತದ ಹಣವನ್ನು ಹಿಂದೂಸ್ತಾನಕ್ಕೆ ಹಿಂತಿರುಗಿಸಿ. ಕೆನಡಾವು ವ್ಯವಹಾರದ ಸೋಗಿನಲ್ಲಿ ಹಿಂಸಾತ್ಮಕ ಹಿಂದುತ್ವ ಸಿದ್ಧಾಂತವು ಕೆನಡಾದ ನೆಲದಲ್ಲಿ ಬೇರೂರಲು ಬಿಡುವುದಿಲ್ಲ. ಇದು ಕೇವಲ ಹಾಸ್ಯ ಸ್ಥಳವೇ ಅಥವಾ ಹಿಂದುತ್ವವನ್ನು ರಫ್ತು ಮಾಡುವ ದೊಡ್ಡ ತಂತ್ರದ ಭಾಗವೇ ಎಂದು ಪನ್ನುನ್ ಗುಡುಗಿದ್ದಾನೆ.
ವ್ಯಾಪಾರದ ನೆಪದಲ್ಲಿ ಕಪಿಲ್ ಶರ್ಮಾ ಕೆನಡಾದಲ್ಲಿ ಹಿಂದುತ್ವ ಸಿದ್ಧಾಂತ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಗುರುಪತ್ವಂತ್ ಸಿಂಗ್ ಪನ್ನುನ್, ಕೆನಡಾ ತನ್ನ ನೆಲದಲ್ಲಿ ಅಂತಹ ವಿಚಾರಗಳನ್ನು ರೂಪಿಸಲು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಅಂದಹಾಗೆ 2019ರಲ್ಲಿ ಭಾರತ ಗೃಹ ಸಚಿವಾಲಯ ಇದೇ ಗುರುಪತ್ವಂತ್ ಸಿಂಗ್ ಪನ್ನುನ್ ನನ್ನು"ವೈಯಕ್ತಿಕ ಭಯೋತ್ಪಾದಕ" ಎಂದು ಗೊತ್ತುಪಡಿಸಿತ್ತು.
ಕೆನಡಾದಲ್ಲಿ ಕಪಿಲ್ ಶರ್ಮಾ ಕೆಫೆ
ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಕಪಿಲ್ ಶರ್ಮಾ ಹೊಸದಾಗಿ ತಮ್ಮ ಕ್ಯಾಪ್ಸ್ ಕೆಫೆ ರೆಸ್ಟೋರೆಂಟ್ ತೆರೆದಿದ್ದರು. ಈ ಕೆಫೆ ಮೇಲೆ 2 ದಿನಗಳ ಹಿಂದೆ ಇದೇ ಖಲಿಸ್ತಾನಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಕೆಫೆಯನ್ನು ಗುರಿಯಾಗಿಸಿಕೊಂಡು ಸುಮಾರು 9 ಸುತ್ತು ಗುಂಡು ಹಾರಿಸಿದ್ದರು. ಈ ಘಟನೆಯ ಹೊಣೆಯನ್ನು ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (BKI) ಗೆ ಸಂಬಂಧಿಸಿದ ಹರ್ಜಿತ್ ಸಿಂಗ್ ಲಡ್ಡಿ ಮತ್ತು ತೂಫಾನ್ ಸಿಂಗ್ ದಾಳಿಯ ಹೊಣೆಯನ್ನು ಹೊತ್ತಿದ್ದಾರೆ.
ಬಿಕೆಐ ಅನ್ನು ಕೆನಡಾ ಸರ್ಕಾರವು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಲಡ್ಡಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಮೋಸ್ಟ್-ವಾಂಟೆಡ್ ಪಟ್ಟಿಯಲ್ಲಿದ್ದಾರೆ.
SFJ ನಿಷೇಧಿತ ಸಂಘಟನೆ
ಪನ್ನುನ್ ನೇತೃತ್ವದ SFJ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ನಿಷೇಧಿತ ಸಂಘಟನೆಯಾಗಿದೆ. ದೇಶದ ಆಂತರಿಕ ಭದ್ರತೆ ಮತ್ತು ಸಮಗ್ರತೆಗೆ ಹಾನಿಕರವಾಗಿದೆ. SFJ ಪಂಜಾಬ್ ಮತ್ತು ಇತರೆಡೆಗಳಲ್ಲಿ ರಾಷ್ಟ್ರವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
Advertisement