
ವಾಷಿಂಗ್ಟನ್: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬಳಿಕ ಭಾರತ–ಪಾಕಿಸ್ತಾನ ನಡುವೆ ಏರ್ಪಟ್ಟ ಸಂಘರ್ಷದ ವೇಳೆ ಐದು ಯುದ್ಧ ವಿಮಾನಗಳು ನಾಶವಾಗಿದ್ದು, ವ್ಯಾಪಾರ ಬೆದರಿಕೆ ಹಾಕುವ ಮೂಲಕ ಯುದ್ಧ ನಿಲ್ಲಿಸಿದ್ದೆವು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಹೇಳಿದ್ದಾರೆ.
ಶ್ರೇತಭವನದಲ್ಲಿ ರಿಪಬ್ಲಿಕನ್ ಪಕ್ಷದ ಶಾಸಕರಿಗೆ ಏರ್ಪಡಿಸಿದ್ದ ಔತಣಕೂಟದ ಸಂದರ್ಭದಲ್ಲಿ ಟ್ರಂಪ್ ಅವರು ಹೇಳಿಕೆ ನೀಡಿದ್ದಾರೆ.
ಭಾರತ-ಪಾಕಿಸ್ತಾನ ಕದನ ವಿರಾಮ ನನ್ನಿಂದಲೇ ಆಗಿದ್ದು. ವ್ಯಾಪಾರ ಬೆದರಿಕೆಯನ್ನು ಬಳಸಿಕೊಂಡು ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ಮಾಡಲಾಯಿತು ಎಂದು ಹೇಳಿದರು.
ಇದೇ ವೇಳೆ ಸಂಘರ್ಷದ ಸಂದರ್ಭದಲ್ಲೇ ಯುದ್ಧ ವಿಮಾನಗಳು ನಾಶವಾಗಿರಬಹುದು. ಈ ಸಂಖ್ಯೆ ನಾಲ್ಕು ಅಥವಾ ಐದು ಇರಬಹುದು. ಐದು ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ. ಆದರೆ, ಹೊಡೆದುರುಳಿಸಲಾಗಿರುವ ಯುದ್ಧ ವಿಮಾನಗಳು ಯಾವ ದೇಶದವು ಎಂಬುದನ್ನು ಟ್ರಂಪ್ ಅವರು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.
ಪರಿಸ್ಥಿತಿ ಅತ್ಯಂತ ಕೆಟ್ಟದಾಗಿತ್ತು. ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಂಡು ಬಂದಿತ್ತು. ಎರಡೂ ರಾಷ್ಟ್ರಗಳು ಪರಮಾಣು ಬಾಂಬ್ ಹೊಂದಿರುವ ರಾಷ್ಟ್ರಗಳಾಗಿವೆ. ಪರಸ್ಪರ ಯುದ್ಧಕ್ಕೆ ಮುಂದಾಗಿದ್ದವು. ಹೀಗಾಗಿ ವ್ಯಾಪಾರ ಬೆದರಿಕೆಕ ಹಾಕಿ ಯುದ್ಧ ನಿಲ್ಲಿಸಿದೆವು.
ಪರಮಾಣು ಬಾಂಬ್ ಪ್ರಯೋಗಿಸಿದ್ದೇ ಆದರೆ, ನಾವು ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆವು. ಈ ಮೂಲಕ ಯುದ್ಧ ನಿಲ್ಲಿಸಿದೆವು. ನಮ್ಮ ಆಡಳಿತವು ಎಂಟು ವರ್ಷಗಳಲ್ಲಿ ಯಾವುದೇ ಇತರ ಆಡಳಿತವು ಸಾಧಿಸಲಾಗದ್ದನ್ನು ಆರು ತಿಂಗಳಲ್ಲಿ ಸಾಧಿಸಿದೆ. ಇದು ನನಗೆ ತುಂಬಾ ಹೆಮ್ಮೆಯ ವಿಷಯ. ನಾವು ಬಹಳಷ್ಟು ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅವು ಗಂಭೀರ ಯುದ್ಧಗಳಾಗಿದ್ದವು ಎಂದು ತಿಳಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟು, 16 ಮಂದಿ ಗಾಯಗೊಂಡಿದ್ದರು.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು `ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಪಾಕ್‌ನ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅದಾದ ಬಳಿಕ ಪಾಕಿಸ್ತಾನ ಹಲವು ಬಾರಿ ಅಪ್ರಚೋದಿತ ದಾಳಿ ನಡೆಸಿದ್ದು, ಮೇ 10ರಂದು ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ.
Advertisement