
ಪ್ಯಾರಿಸ್: ಗಾಜಾದಲ್ಲಿ ಹಸಿವಿನಿಂದ ಬಳಲುತ್ತಿರುವ ನಾಗರಿಕರ ಬಗ್ಗೆ ಜಾಗತಿಕವಾಗಿ ಹೆಚ್ಚುತ್ತಿರುವ ಆಕ್ರೋಶದ ನಡುವೆ, ಫ್ರಾನ್ಸ್ ಪ್ಯಾಲೆಸ್ತೀನ್ ನ್ನು ಒಂದು ರಾಷ್ಟ್ರವಾಗಿ ಗುರುತಿಸುವುದಾಗಿ ಘೋಷಿಸಿದೆ. ಫ್ರಾನ್ಸ್ ನ ಈ ನಿರ್ಧಾರವನ್ನು ಇಸ್ರೇಲ್ ಖಂಡಿಸಿದೆ.
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ಅಧಿಕೃತಗೊಳಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಎಮ್ಮನ್ಯುಯೆಲ್ ಮ್ಯಾಕ್ರನ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ಇಂದಿನ ತುರ್ತು ವಿಷಯವೆಂದರೆ ಗಾಜಾದಲ್ಲಿ ಯುದ್ಧ ನಿಲ್ಲಿಸಿ ನಾಗರಿಕರನ್ನು ಉಳಿಸುವುದು ಎಂದು ಅವರು ಬರೆದಿದ್ದಾರೆ.
ಗಾಜಾ ಪಟ್ಟಿಯಲ್ಲಿ ಯುದ್ಧ ಮತ್ತು ಮಾನವೀಯ ಬಿಕ್ಕಟ್ಟು ಭುಗಿಲೆದ್ದಿರುವಾಗ ಈ ಸಾಂಕೇತಿಕ ನಡೆ ಇಸ್ರೇಲ್ ಮೇಲೆ ಹೆಚ್ಚಿನ ರಾಜತಾಂತ್ರಿಕ ಒತ್ತಡವನ್ನು ಬೀರುತ್ತದೆ. ಫ್ರಾನ್ಸ್ ಈಗ ಪ್ಯಾಲೆಸ್ತೀನ್ ನ್ನು ಗುರುತಿಸುವ ಅತಿದೊಡ್ಡ ಪಾಶ್ಚಿಮಾತ್ಯ ಶಕ್ತಿಯಾಗಿದೆ. ಈ ನಡೆ ಇತರ ದೇಶಗಳು ಸಹ ಅದೇ ರೀತಿ ಮಾಡಲು ದಾರಿ ಮಾಡಿಕೊಡಬಹುದು. ಯುರೋಪ್‌ನಲ್ಲಿ ಒಂದು ಡಜನ್‌ಗೂ ಹೆಚ್ಚು ರಾಷ್ಟ್ರಗಳು ಸೇರಿದಂತೆ 140 ಕ್ಕೂ ಹೆಚ್ಚು ದೇಶಗಳು ಪ್ಯಾಲೆಸ್ತೀನ್ ನ್ನು ದೇಶವಾಗಿ ಗುರುತಿಸಿವೆ.
ಆಕ್ರಮಿತ ಪಶ್ಚಿಮ ದಂಡೆ, ಪೂರ್ವ ಜೆರುಸಲೆಮ್ ಮತ್ತು ಗಾಜಾವನ್ನು ಸ್ವಾಧೀನಪಡಿಸಿಕೊಂಡ ಪ್ರದೇಶಗಳು, 1967 ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ಆಕ್ರಮಿಸಿಕೊಂಡ ಪ್ರದೇಶಗಳಲ್ಲಿ ಸ್ವತಂತ್ರ ದೇಶವನ್ನು ಪ್ಯಾಲೆಸ್ತೀನಿಯನ್ನರು ಹುಡುಕುತ್ತಿದ್ದಾರೆ. ಇಸ್ರೇಲ್ ಸರ್ಕಾರ ಮತ್ತು ಅದರ ಹೆಚ್ಚಿನ ರಾಜಕೀಯ ವರ್ಗವು ಪ್ಯಾಲೆಸ್ತೀನ್ ನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿವೆ. ಹಮಾಸ್‌ನ ಅಕ್ಟೋಬರ್ 7, 2023 ರ ದಾಳಿಯ ನಂತರ ಉಗ್ರಗಾಮಿಗಳಿಗೆ ಬಹುಮಾನ ನೀಡುವುದಾಗಿ ಹೇಳುತ್ತಿವೆ.
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ರ ನಿರ್ಧಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಯಲ್ಲಿ ತಿಳಿಸಿದ್ದಾರೆ. 'ಇಂತಹ ನಡೆ ಭಯೋತ್ಪಾದನೆಗೆ ಪ್ರತಿಫಲ ನೀಡುತ್ತದೆ ಮತ್ತು ಗಾಜಾ ಆದಂತೆಯೇ ಮತ್ತೊಂದು ಇರಾನಿನ ಪ್ರಾಕ್ಸಿಯನ್ನು ಸೃಷ್ಟಿಸುವ ಅಪಾಯವನ್ನುಂಟುಮಾಡುತ್ತದೆ. ಈ ಪರಿಸ್ಥಿತಿಗಳಲ್ಲಿ ಪ್ಯಾಲೆಸ್ತೀನ್ ಇಸ್ರೇಲ್ ನ್ನು ನಿರ್ಮೂಲನೆ ಮಾಡಲು ಒಂದು ವೇದಿಕೆಯಾಗಿರುತ್ತದೆ ಎಂದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರದಿಂದ ಈ ಬಗ್ಗೆ ತಕ್ಷಣ ಪ್ರತಿಕ್ರಿಯೆ ಬಂದಿಲ್ಲ. ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಮುಂದಿನ ವಾರ ವಿಶ್ವಸಂಸ್ಥೆಯಲ್ಲಿ ಎರಡು-ರಾಜ್ಯ ಪರಿಹಾರದ ಕುರಿತು ಸಮ್ಮೇಳನವನ್ನು ಜಂಟಿಯಾಗಿ ಆಯೋಜಿಸುವ ಕೆಲವು ದಿನಗಳ ಮೊದಲು ಫ್ರಾನ್ಸ್ ಅಧ್ಯಕ್ಷರ ಈ ಘೋಷಣೆ ಬಂದಿದೆ.
Advertisement