
ಲಂಡನ್: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ಬ್ರಿಟನ್ ಬೆಂಬಲಿಸುತ್ತದೆ ಎಂದು ಇಂಡೋ-ಪೆಸಿಫಿಕ್ ಸಚಿವೆ ಕ್ಯಾಥರೀನ್ ವೆಸ್ಟ್ ಅವರು ಸೋಮವಾರ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ನೇತೃತ್ವದ ಸರ್ವಪಕ್ಷ ನಿಯೋಗಕ್ಕೆ ತಿಳಿಸಿದ್ದಾರೆ.
ಭಾರತದ ಸರ್ವಪಕ್ಷ ಸಂಸದರ ನಿಯೋಗ ಇಂದು ಲಂಡನ್‌ನ ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯಲ್ಲಿ(ಎಫ್‌ಸಿಡಿಒ) ಕ್ಯಾಥರೀನ್ ವೆಸ್ಟ್ ಅವರೊಂದಿಗೆ ಸಭೆ ನಡೆಸಿತು.
ಈ ವೇಳೆ ಭಯೋತ್ಪಾದನೆಯ ವಿರುದ್ಧ ಭಾರತದ ಸಂಕಲ್ಪವನ್ನು ಸಂಸದರ ನಿಯೋಗವು ಎತ್ತಿ ತೋರಿಸಿತು ಮತ್ತು ಮಾನವೀಯತೆಯ ಹಿತಾಸಕ್ತಿಗಳಿಂದ ಇದನ್ನು ನಿರ್ಮೂಲನೆ ಮಾಡಬೇಕು ಎಂದು ಒತ್ತಿ ಹೇಳಿದೆ.
ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಯುಕೆ ಖಂಡಿಸಿದ್ದನ್ನು ಕ್ಯಾಥರೀನ್ ವೆಸ್ಟ್ ಪುನರುಚ್ಚರಿಸಿದರು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸ್ಥಿರತೆಗೆ ಭಾರತದ ಕೊಡುಗೆಗಳನ್ನು ಶ್ಲಾಘಿಸಿದರು.
"ಭಯೋತ್ಪಾದನೆಯು ಎಲ್ಲಾ ರಾಷ್ಟ್ರಗಳಿಗೆ ಬೆದರಿಕೆಯಾಗಿ ಉಳಿದಿದೆ. ಆದ್ದರಿಂದ ಎಲ್ಲಾ ಮಾನವೀಯತೆಯ ಹಿತಾಸಕ್ತಿಗಳಿಗಾಗಿ ಜಗತ್ತು ಈ ಪಿಡುಗನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ವೆಸ್ಟ್ ಹೇಳಿದರು" ಎಂದು ಸಭೆಯ ನಂತರ ಭಾರತದ ಹೈಕಮಿಷನ್ ಸಾಮಾಜಿಕ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
Advertisement