
ಕ್ಯಾಲ್ಗರಿ (ಕೆನಡಾ): ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ 51ನೇ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಕ್ಯಾಲ್ಗರಿ ತಲುಪಿದ್ದು, ಈ ಭೇಟಿಯಿಂದ ಭಾರತ-ಕೆನಡಾ ಸಂಬಂಧಗಳಲ್ಲಿ ಹದಗೆಟ್ಟ ರಾಜತಾಂತ್ರಿಕ ಸಂಬಂಧಗಳು ವೃದ್ಧಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕೆನಡಾದ ಪ್ರಧಾನ ಮಂತ್ರಿಯಾಗಿದ್ದ ಜಸ್ಟಿನ್ ಟ್ರುಡೊ ಅವರು ಸೆಪ್ಟೆಂಬರ್ 2023 ರಲ್ಲಿ ಭಾರತದ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. ಇದರಿಂದ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿತ್ತು.
ಖಲಿಸ್ತಾನಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ರನ್ನು ಜೂನ್ 2023ರಲ್ಲಿ ವ್ಯಾಂಕೋವರ್‌ನಲ್ಲಿರುವ ಅವರ ಮನೆಯ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಕೆನಡಾ ಸರ್ಕಾರವು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಮಾಡಿತ್ತು. ಆದರೆ. ಕೆನಡಾ ಸರ್ಕಾರದ ಆರೋಪಗಳನ್ನು ಭಾರತ ಸರ್ಕಾರ ತಳ್ಳಿ ಹಾಕಿತ್ತು. ಮಾತ್ರವಲ್ಲದೇ ಕೆನಡಾ ಸರ್ಕಾರದ ವಿರುದ್ಧ ಕಿಡಿಕಾರಿತ್ತು.
ಉಭಯ ರಾಷ್ಟ್ರಗಳ ನಡುವೆ ಸಾಕಷ್ಟು ರಾಜತಾಂತ್ರಿಕ ಜಟಾಪಟಿ ಬೆನ್ನಲ್ಲೇ ಪ್ರಧಾನಿ ಮೋದಿಯವರು ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರ ಆಹ್ವಾನದ ಮೇರೆಗೆ ಕೆನಡಾಗೆ ಭೇಟಿ ನೀಡಿದ್ದಾರೆ. ಟ್ರುಡೊ ನಿರ್ಗಮನದ ನಂತರ ಕೆನಡಾದೊಂದಿಗೆ ಸಂಬಂಧಗಳನ್ನು ಪುನರ್ನಿರ್ಮಿಸಲು ಉಭಯ ರಾಷ್ಟ್ರಗಳು ಯತ್ನ ನಡೆಸುವ ಸಾಧ್ಯತೆಗಳಿವೆ.
ಭಾನುವಾರ ಸಂಜೆ ಸೈಪ್ರಸ್ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಭಾರತದ ಅಧಿಕಾರಿಗಳ ನಿಯೋಗ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಇನ್ನು ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾಗಿ ಕುರಿತು ತೀವ್ರ ಕುತೂಹಲಗಳು ಮೂಡತೊಡಗಿವೆ.
ಕೆನಡಾದ ಜೊತೆಗಿನ ವ್ಯಾಪಾರ ಸಂಘರ್ಷ, 2018 ರಲ್ಲಿ ತಮ್ಮ ಮೊದಲ ಅವಧಿಯ ಅಧಿಕಾರದಲ್ಲಿ ಟ್ರಂಪ್ ಜಿ7 ಶೃಂಗದಿಂದ ಹೊರನಡೆದಿದ್ದರು. ಮತ್ತೆ ಅಮೆರಿಕದ ಜಿ7 ರಾಷ್ಟ್ರಗಳ ಸದಸ್ಯತ್ವ ಪಡೆದಿದ್ದು, ಅಧ್ಯಕ್ಷ ಟ್ರಂಪ್ ಅವರು ಭಾಗವಹಿಸುತ್ತಿದ್ದಾರೆ.
ಏತನ್ಮಧ್ಯೆ ಇರಾನ್ ಮತ್ತು ಇಸ್ರೇಲ್ ನಡುವೆ ತೀವ್ರ ಸಂಘರ್ಷ ನಡೆಯುತ್ತಿದ್ದು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಈ ಶೃಂಗಸಭೆ ನಡೆಯುತ್ತಿದೆ. ಉಭಯ ರಾಷ್ಟ್ರಗಳ ನಡುವಿನ ದಾಳಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.
Advertisement