
ವಾಷಿಂಗ್ಟನ್: ಇಸ್ರೇಲ್-ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಅಧಿಕೃತ ಎಂಟ್ರಿಕೊಟ್ಟಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಅಲಿ ಖಮೇನಿ ಶರಣಾಗಬೇಕೆಂದು ಎಚ್ಚರಿಕೆ ನೀಡಿದೆ.
ಜಿ7 ದೇಶಗಳ ಶೃಂಗಸಭೆ ವೇಳೆ ಅರ್ಧಕ್ಕೇ ಹೊರ ಬಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿ, ಖಮೇನಿ ಶರಣಾಗುವಂತೆ ಸೂಚಿಸಿದ್ದಾರೆ.
ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ವ್ಯಕ್ತಿ ಎಲ್ಲಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಆದರೆ, ಆತನನ್ನು ನಾವು ಹತ್ಯೆ ಮಾಡಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಇರಾನ್ ಪ್ರತೀಕಾರದ ಭಯದಿಂದ ಅಮೆರಿಕದ ನಾಗರಿಕರು ಮತ್ತು ಸೇನಾ ಪಡೆಗಳ ಮೇಲೆ ದಾಳಿ ಮಾಡದಿರುವ ನಿರ್ಧಾರ ಕೈಗೊಂಡಿದೆ. ಇದು ಇರಾನ್ ಅಸ್ತಿತ್ವಕ್ಕಾಗಿ ಕೈಗೊಂಡ ಅನಿವಾರ್ಯ ನಿರ್ಧಾರ. ಆದರೆ, ನಮ್ಮ ತಾಳ್ಮೆ ಕ್ಷೀಣಿಸುತ್ತಿದ್ದು, ಇರಾನ್ ಈ ಕೂಡಲೇ ಭೇಷರತ್ ಶರಣಾಗತಿಗೆ ಒಪಿಕೊಳ್ಳಬೇಕು.
ಇರಾನ್ ಶರಣಾಗತಿ ಘೋಷಿಸಿ ಪರಮಾಣು ಒಪ್ಪಂದ ಮಾತುಕತೆಗೆ ಮುಂದಾಗಬೇಕು ಎಂಬುದು ನಮ್ಮ ಬಯಕೆಯಾಗಿದೆ. ಈ ಗುರಿಯನ್ನು ಸಾಧಿಸಲು ನಾವು ಜಂಟಿ ಪ್ರಯತ್ನಗಳನ್ನು ಮುಂದುವರೆಸುತ್ತೇವೆ. ಇರಾನ್ ಇಷ್ಟೊತ್ತಿಗೆ ಪರಮಾಣು ಒಪ್ಪಂದ ಮಾತುಕತೆಗೆ ಸಿದ್ಧವಾಗಬೇಕಿತ್ತು. ನಾನು ಹಲವಾರು ಬಾರಿ ಈ ಕುರಿತು ಇರಾನ್ ಉನ್ನತ ರಾಜಕೀಯ ನಾಯಕತ್ವಕ್ಕೆ ಮನವಿ ಮಾಡಿದ್ದೇನೆ. ಆದರೆ, ಆಗೆಲ್ಲಾ ಏರು ಧ್ವನಿಯಲ್ಲಿ ಗುಡುಗುತ್ತಿದ್ದ ಇರಾನ್ ನಾಯಕರು, ಈಗ ಆತ್ಮರಕ್ಷಣೆಗಾಗಿ ಬಂಕರ್‌ನಲ್ಲಿ ಅಡಗಿ ಕುಳಿತಿದ್ದಾರೆ. ನಮ್ಮ ತಾಳ್ಮೆ ಕ್ಷೀಣಿಸುತ್ತಿದ್ದು, ಇರಾನ್ ಬೇಷರತ್ ಆಗಿ ಶರಣಾಗಿ ಮಾತುಕತೆ ಮೇಜಿನ ಮೇಲೆ ಬರಬೇಕು.
ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ನಿರ್ಮಿಸುತ್ತಿಲ್ಲ ಎಂಬುದನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಇರಾನ್ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವಾಗುವುದಕ್ಕೆ ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಕೂಡ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಯುದ್ಧ ಆರಂಭ ಎಂದು ಹೇಳಿದ್ದಾರೆ. ಈ ಮೂಲಕ ಟ್ರಂಪ್ ಅವರ ಎಚ್ಚರಿಕೆಯನ್ನು ತಿರಸ್ಕರಿಸುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.
Advertisement