
ವಾಷಿಂಗ್ಟನ್: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಬಳಿಕ 'ಭಾರತ ಮತ್ತು ಪಾಕಿಸ್ತಾನ ನಡುವೆ ಉಲ್ಬಣಗೊಂಡಿದ್ದ ಯುದ್ಧವನ್ನು ಸ್ಥಗಿತ ಮಾಡಿದ್ದು ನಾನೇ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ ಕೀರ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಪಾಕಿಸ್ತಾನ ನಡುವಿ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಭಾರತ ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಮತ್ತೆ ಭಾರತ ಪಾಕಿಸ್ತಾನ ವಿಚಾರವಾಗಿ ಡೊನಾಲ್ಡ್ ಟ್ರಂಪ್ ಮತ್ತೆ ಮಾತನಾಡಿದ್ದು, ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದು ನಾನಾ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, 'ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದೆ. ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಮೋದಿ ಒಬ್ಬ ಅದ್ಭುತ ವ್ಯಕ್ತಿ. ನಾನು ನಿನ್ನೆ ರಾತ್ರಿ ಅವರೊಂದಿಗೆ ಮಾತನಾಡಿದೆ" ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಯೋಜನೆಗಳನ್ನು ಉಲ್ಲೇಖಿಸುತ್ತಾ, "ನಾವು ಭಾರತದ ಪ್ರಧಾನಿ ಮೋದಿಯೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಿದ್ದೇವೆ. ಆದರೆ ನಾನು ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧವನ್ನು ನಿಲ್ಲಿಸಿದೆ ಎಂದರು.
ಯುದ್ಧ ನಿಲ್ಲಿಸಲು ಅತ್ಯಂತ ಪ್ರಭಾವಶಾಲಿಯಾಗಿದ್ದರು
ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಇಬ್ಬರನ್ನೂ ಶ್ಲಾಘಿಸಿದ ಟ್ರಂಪ್, "ಈ ವ್ಯಕ್ತಿ (ಮುನೀರ್) ಪಾಕಿಸ್ತಾನದ ಕಡೆಯಿಂದ ಯುದ್ಧವನ್ನು ನಿಲ್ಲಿಸುವಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದರು, ಇನ್ನೊಂದು ಕಡೆಯಿಂದ ಮೋದಿ. ಅವರು ಅದನ್ನು ಮಾಡಲು ಹೊರಟಿದ್ದರು ಮತ್ತು ಅವರಿಬ್ಬರೂ ಪರಮಾಣು ಸಹಿತ ರಾಷ್ಟ್ರಗಳು... ನಾನು ಎರಡು ಪ್ರಮುಖ ಪರಮಾಣು ರಾಷ್ಟ್ರಗಳ ನಡುವಿನ ಯುದ್ಧವನ್ನು ನಿಲ್ಲಿಸಿದೆ. ಆದರೆ ಅದರ ಬಗ್ಗೆ ಒಂದು ಕಥೆಯೂ ಬರೆಯಲ್ಪಟ್ಟಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಮೂರನೇ ವ್ಯಕ್ತಿ ಹಸ್ತಕ್ಷೇಪ ಸಹಿಸಲ್ಲ: ಟ್ರಂಪ್ ಗೆ ಮೋದಿ ಸ್ಪಷ್ಟ ಸಂದೇಶ
ಇನ್ನು ಇದಕ್ಕೂ ಮೊದಲು, ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಭಾರತ ಯಾವುದೇ ಮಧ್ಯಸ್ಥಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟಪಡಿಸಿದ್ದರು. ಅಲ್ಲದೆ ಅಂತಹ ಮಧ್ಯಸ್ಥಿಕೆಗಳಿಗೆ ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಅವರು ಪುನರುಚ್ಚರಿಸಿದರು. ಮೋದಿ ಅವರೊಂದಿಗಿನ 35 ನಿಮಿಷಗಳ ಫೋನ್ ಸಂಭಾಷಣೆಯ ಕೆಲವೇ ಗಂಟೆಗಳ ನಂತರ ಟ್ರಂಪ್ ಅವರ ಹೇಳಿಕೆ ಬಂದಿವೆ. ಆ ಸಮಯದಲ್ಲಿ ಮೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ನಿರ್ಧಾರವನ್ನು ಎರಡು ಸೇನೆಗಳ ನಡುವೆ ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಪ್ರಧಾನಿ ಸ್ಪಷ್ಟಪಡಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಕರೆ ಕುರಿತು ಮಾತನಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, 'ಕೆನಡಾದಿಂದ ಹಿಂದಿರುಗಿದ ನಂತರ ಮೋದಿ ಅಮೆರಿಕಕ್ಕೆ ಬರಬಹುದೇ ಎಂದು ಟ್ರಂಪ್ ಕೇಳಿದರು. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿಂದಾಗಿ ಪ್ರಧಾನಿ ಮೋದಿ ಬರಲು ಸಾಧ್ಯವಿಲ್ಲ. ಆದರೆ ಇಬ್ಬರೂ ನಾಯಕರು ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡರು ಎಂದು ಹೇಳಿದರು.
"ಭಾರತ ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ, ಸ್ವೀಕರಿಸುವುದಿಲ್ಲ ಮತ್ತು ಎಂದಿಗೂ ಮಾಡುವುದಿಲ್ಲ" ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮೋದಿ ಹೇಳಿಕೆ ಉಲ್ಲೇಖಿಸಿ ವರದಿಗಾರರಿಗೆ ತಿಳಿಸಿದರು.
ಮೇ 7 ಮತ್ತು 10 ರ ನಡುವಿನ ನಾಲ್ಕು ದಿನಗಳ ಉದ್ವಿಗ್ನತೆಯ ಸಮಯದಲ್ಲಿ, ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಅಥವಾ ವಾಷಿಂಗ್ಟನ್‌ನ ಯಾವುದೇ ಮಧ್ಯಸ್ಥಿಕೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಯಾವುದೇ ಸಮಯದಲ್ಲಿ ಅಥವಾ ಯಾವುದೇ ಮಟ್ಟದಲ್ಲಿ ಅಲ್ಲ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಸರ್ಕಾರದ ನಿಲುವನ್ನು ಮೋದಿ ಟ್ರಂಪ್‌ಗೆ ವಿವರಿಸಿದರು. ಭಯೋತ್ಪಾದನೆಯ ವಿರುದ್ಧ ದೃಢವಾಗಿ ಕಾರ್ಯನಿರ್ವಹಿಸುವ ನಿರ್ಧಾರವನ್ನು ಭಾರತ ಸ್ಪಷ್ಟವಾಗಿ ತಿಳಿಸಿದೆ. ಪಾಕಿಸ್ತಾನದಿಂದ ಯಾವುದೇ ಆಕ್ರಮಣಕಾರಿ ಕೃತ್ಯಕ್ಕೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಭಾರತ ಸ್ಪಷ್ಟಪಡಿಸಿತ್ತು" ಎಂದು ಮಿಶ್ರಿ ಹೇಳಿದರು.
ಮುನೀರ್ ಗೆ ವಿಶೇಷ ಭೋಜನಕೂಟ
ಅತ್ತ ಇಸ್ರೇಲ್ ಇರಾನ್ ಯುದ್ಧ ಮುಂದುವರೆದಿರುವಂತೆಯೇ ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸಿದ್ದಾರೆ. ಅಧ್ಯಕ್ಷರು ಪಾಕಿಸ್ತಾನ ಇಸ್ಲಾಮಿಕ್ ಗಣರಾಜ್ಯದ ಸೇನಾ ಮುಖ್ಯಸ್ಥರೊಂದಿಗೆ ಊಟ ಮಾಡುತ್ತಾರೆ ಎಂದು ಶ್ವೇತಭವನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೂಟವು ಮಧ್ಯಾಹ್ನ 1 ಗಂಟೆಗೆ (ಸ್ಥಳೀಯ ಸಮಯ) ಶ್ವೇತಭವನದ ಕ್ಯಾಬಿನೆಟ್ ಕೊಠಡಿಯಲ್ಲಿ ನಡೆಯಲಿದೆ. ಜಿ7 ನಾಯಕರ ಶೃಂಗಸಭೆಗಾಗಿ ಕೆನಡಾದ ಕನನಾಸ್ತಿಸ್‌ಗೆ ತಮ್ಮ ಪ್ರವಾಸವನ್ನು ಟ್ರಂಪ್ ಮೊಟಕುಗೊಳಿಸಿದ್ದರು ಮತ್ತು ಇತ್ತೀಚಿನ ಇಸ್ರೇಲ್-ಇರಾನ್ ಸಂಘರ್ಷದೊಂದಿಗೆ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನಿನ್ನೆ ಬೆಳಿಗ್ಗೆ ವಾಷಿಂಗ್ಟನ್‌ಗೆ ಮರಳಿದರು.
Advertisement