
ವಾಷಿಂಗ್ಟನ್: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವ ವ್ಲಾಡಿಮಿರ್ ಪುಟಿನ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರಷ್ಯಾದ ಅಧ್ಯಕ್ಷರು ಮೊದಲು ಉಕ್ರೇನ್ ಜೊತೆಗಿನ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಹೊಸ ಧ್ವಜ ಸ್ತಂಭ ಅನಾವರಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್, ರಷ್ಯಾ ಅಧ್ಯಕ್ಷರೊಂದಿಗೆ ನಿನ್ನೆ ಮಾತುಕತೆ ನಡೆಸಿದ್ದೆ. ಇಸ್ರೇಲ್-ಇರಾನ್ ಸಂಘರ್ಷದ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವಿಟ್ಟರು. ಈ ವೇಳೆ ಉಕ್ರೇನ್ ಜೊತೆಗಿನ ಸಮಸ್ಯೆಯನ್ನು ಮೊದಲು ಬಗೆಹರಿಸಿ, ಉಪಕಾರ ಮಾಡಿ. ನಂತರ ಈ ಬಗ್ಗೆ ಚಿಂತನೆ ನಡೆಸಿ ಎಂದು ಹೇಳಿದೆ ಎಂದು ತಿಳಿಸಿದರು.
ಅಂತರಾಷ್ಟ್ರೀಯ ಸುದ್ದಿ ವಾಹನಿಯೊಂದರಲ್ಲಿ ಮಾತನಾಡಿದ್ದ ಪುಟಿನ್, ಇಸ್ರೇಲ್-ಇರಾನ್ ಸಂಘರ್ಷ ಸೂಕ್ಷ್ಮ ವಿಚಾರವಾಗಿದೆ. ಆದರೆ, ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎಂದು ಹೇಳಿದ್ದರು.
ಇದೇ ವೇಳೆ ಇಸ್ರೇಲ್ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದರೆ ರಷ್ಯಾ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಪುಟಿನ್ ಅವರು, ನಾನು ಅಂತಹ ಸಾಧ್ಯತೆಯ ಬಗ್ಗೆ ಚರ್ಚಿಸಲು ಸಹ ಬಯಸುವುದಿಲ್ಲ ಎಂದು ಹೇಳಿದರು.
ಮಧ್ಯಸ್ಥಿಕೆ ಕುರಿತು ಇಸ್ರೇಲ್, ಇರಾನ್ ಹಾಗೂ ಅಮೆರಿಕಾಗೆ ಪ್ರಸ್ತಾಪ ರವಾನಿಸಲಾಗಿದೆ. ನಾವು ಯಾರ ಮೇಲೂ ಏನನ್ನೂ ಹೇರುತ್ತಿಲ್ಲ. ಈ ಪರಿಸ್ಥಿತಿಯಿಂದ ಹೊರಬರುವ ಸಂಭವನೀಯ ಮಾರ್ಗಗಳ ಬಗ್ಗೆಯಷ್ಟೇ ಮಾತನಾಡುತ್ತಿದ್ದೇವೆ. ಆದರೆ ನಿರ್ಧಾರವು ಈ ಎಲ್ಲಾ ದೇಶಗಳ ರಾಜಕೀಯ ನಾಯಕತ್ವಕ್ಕೆ ಬಿಟ್ಟದ್ದು, ಮುಖ್ಯವಾಗಿ ಇರಾನ್ ಮತ್ತು ಇಸ್ರೇಲ್ ಎಂದು ತಿಳಿಸಿದ್ದರು.
ಟ್ರಂಪ್ ತಮ್ಮ ಅಧಿಕಾರದ ಮೊದಲ ಕೆಲವು ತಿಂಗಳುಗಳನ್ನು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಶಮನಗೊಳಿಸಲು ಪ್ರಯತ್ನಿಸಿದ್ದರು. ಆದರೆ, ಕದನ ವಿರಾಮಕ್ಕೆ ಪುಟಿನ್ ನಿರಾಕರಿಸಿದ್ದರು. ಸಾಕಷ್ಟು ರಾಜತಾಂತ್ರಿಕ ಪ್ರಯತ್ನಗಳೂ ಕೂಡ ವಿಫಲಗೊಂಡಿವೆ. ಉಭಯ ರಾಷ್ಟ್ರಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
Advertisement