ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶ ಎದುರಿಸುತ್ತೀರಿ: ಇರಾನ್'ಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಎಚ್ಚರಿಕೆ..!
ವಾಷಿಂಗ್ಟನ್: ಈಗಲೂ ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ರಾಷ್ಟ್ರಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾನುವಾರ ನೇರ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮೇಲಿನ ದಾಳಿಯ ಬಳಿಕ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್ ಅವರು, “ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ದಾಳಿ ನಡೆಸಿ, ಇರಾನ್‌ನ ಪರಮಾಣು ನೆಲೆಗಳನ್ನು ನಾಶಗೊಳಿಸಿದ್ದೇವೆ. ಅಮೆರಿಕ ಬಿಟ್ಟು ಬೇರೆ ಯಾವ ದೇಶದ ಸೇನೆಯೂ ಇದನ್ನು ಮಾಡಲು ಸಾಧ್ಯವಿಲ್ಲ. ಇರಾನ್ ಶಾಂತಿಯ ಹಾದಿಯಲ್ಲಿ ಸಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಗತ್ತಿನ ನಂಬರ್ ಒನ್ ಭಯೋತ್ಪಾದಕ ರಾಷ್ಟ್ರದ ಪರಮಾಣು ಬಾಂಬ್ ತಯಾರಿಕೆಯನ್ನು ತಡೆಯುವುದು ಮುಖ್ಯವಾಗಿತ್ತು. ಈ ನಿಟಿನಲ್ಲಿ ಅಮೆರಿಕಾ ದಾಳಿ ಮಾಡಿದೆ. ಇರಾನ್ ಮೇಲಿನ ದಾಳಿ ಭರ್ಜರಿ ಯಶಸ್ಸನ್ನು ಕಂಡಿದೆ. ಇದು ಜಾಗತಿಕ ಭದ್ರತೆಗೆ ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯವನ್ನು ಬೆದರಿಸುತ್ತಿರುವ ಇರಾನ್, ಇದೀಗ ಶಾಂತಿ ಸ್ಥಾಪಿಸಬೇಕು. ಹಾಗೆ ಮಾಡದಿದ್ದರೆ, ಭವಿಷ್ಯದ ದಾಳಿಗಳು ತುಂಬಾ ದೊಡ್ಡದಾಗಿರುತ್ತವೆ. 40 ವರ್ಷಗಳಿಂದ, ಇರಾನ್ ದೇಶವು ಇಸ್ರೇಲ್‌ಗೆ ಸಾವು, ಅಮೆರಿಕಕ್ಕೆ ಸಾವು ಎಂದು ಹೇಳುತ್ತಾ ಬಂದಿದೆ. ಅವರು ನಮ್ಮ ಜನರನ್ನು ಕೊಲ್ಲುತ್ತಿದ್ದಾರೆ, ಎಷ್ಟೋ ಜನರನ್ನು ಅವರ ಜನರಲ್ ಖಾಸೆಮ್ ಸೊಲೈಮಾನಿ ಕೊಂದರು. ಇನ್ನು ಮುಂದೆ ಹೀಗಾಗಲು ಬಿಡುವುದಿಲ್ಲ. ಮುಂದುವರಿಯುವುದೂ ಇಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ