
ವಾಷಿಂಗ್ಟನ್: ಇಸ್ರೇಲ್-ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಮಹಾತಿರುವು ಪಡೆದುಕೊಂಡಿದ್ದು, ಇರಾನ್ ರಾಷ್ಟ್ರದ 3 ಅಣುಸ್ಥಾವರಗಳ ಮೇಲೆ ದಾಳಿ ನಡೆಸಿ ಸಂಘರ್ಷಕ್ಕೆ ಅಧಿಕೃತ ಎಂಟ್ರಿ ಕೊಟ್ಟಿದ್ದ ವಿಶ್ವದ ದೊಡ್ಣಣ್ಣ ಅಮೆರಿಕಾ ಇದೀಗ ಇಸ್ಲಾಮಿಕ್ ರಿಪಬ್ಲಿಕ್ ರಾಷ್ಟ್ರದಲ್ಲಿ ಅಧಿಕಾರ ಬದಲಾವಣೆ ಮಾಡುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಅಧಿಕಾರ ಬದಲಾವಣೆ ಕುರಿತು ಸುಳಿವು ನೀಡಿದ್ದಾರೆ.
ಇರಾನ್‌ನಲ್ಲಿ ಆಡಳಿತ ಬದಲಾವಣೆ ಮೂಲಕ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಸಾಧ್ಯತೆ ಕುರಿತು ನಾವು ಚಿಂತಿಸುತ್ತಿದ್ದೇವೆ. ಆಡಳಿತ ಬದಲಾವಣೆ ಎಂಬ ಪದವನ್ನು ಬಳಸುವುದು ರಾಜಕೀಯವಾಗಿ ಸರಿಯಲ್ಲ, ಆದರೆ, ಪ್ರಸ್ತುತ ಆಯತೊಲ್ಲಾ ಅಲಿ ಖಮೇನಿ ಆಡಳಿತ ಇರಾನ್‌ನ್ನು ಮತ್ತೆ ಶ್ರೇಷ್ಠಗೊಳಿಸಲು (Make Iran Great Again-MIGA) ಸಾಧ್ಯವಾಗದಿದ್ದರೆ, ಆಡಳಿತ ಬದಲಾವಣೆ ಬಗ್ಗೆ ಏಕೆ ಚಿಂತಿಸಬಾರದು? ಎಂದು ಹೇಳಿದ್ದಾರೆ.
ಇದೇ ವೇಳೆ ಇರಾನ್ ಮೇಲೆ 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ಯಶಸ್ವಿ ಕಾರ್ಯಾಚರಣೆಯ ಬಳಿಕ ಅಮೆರಿಕದ ಬಿ-2 ಯುದ್ಧ ವಿಮಾನಗಳು ಸುರಕ್ಷಿತವಾಗಿ ಮಿಸ್ಸೋರಿಯಲ್ಲಿ ಬಂದಿಳಿವೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಕಠಿಣ ಹಾಗೂ ನಿಖರವಾಗಿದ್ದವು. ನಮ್ಮ ಸೇನೆಯ ಸಾಮರ್ಥ್ಯವನ್ನು ತೋರಿಸಿದೆ ಎಂದೂ ತಿಳಿಸಿದ್ದಾರೆ.
ನಿನ್ನಯಷ್ಟೇ ಅಮೆರಿಕಾ ಇರಾನ್ ಇರಾನ್ ರಾಷ್ಟ್ರದ 3 ಅಣುಸ್ಥಾವರಗಳ ಮೇಲೆ ದಾಳಿ ನಡೆಸಿತ್ತು. ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಸೇರಿದಂತೆ ಮೂರು ಪ್ರಮುಖ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿತ್ತು.
ದಾಳಿ ಕುರಿತು ಹೇಳಿಕೆ ನೀಡಿದ್ದ ಟ್ರಂಪ್ ಅವರು, ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್‌ನಲ್ಲಿರುವ ಇರಾನಿನ ಪರಮಾಣು ನೆಲೆಗಳ ಮೇಲೆ ಅಮೆರಿಕವು ಅತ್ಯಂತ ಯಶಸ್ವಿಯಾಗಿ ದಾಳಿಗಳನ್ನು ನಡೆಸಿದೆ. ಎಲ್ಲಾ ವಿಮಾನಗಳು ಈಗ ಇರಾನಿನ ವಾಯುಪ್ರದೇಶದಿಂದ ಹೊರಗಿವೆ ಎಂದು ಹೇಳಿದ್ದರು.
ಇರಾನ್‌ನಲ್ಲಿರುವ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಮೂರು ಪರಮಾಣು ತಾಣಗಳ ಮೇಲೆ ನಾವು ನಮ್ಮ ಅತ್ಯಂತ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ನಮ್ಮ ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಸುರಕ್ಷಿತವಾಗಿವೆ ಎಂದು ತಿಳಿಸಿದ್ದರು.
ಅಲ್ಲದೆ, ಈಗಲೂ ಶಾಂತಿ ಸ್ಥಾಪಿಸದಿದ್ದರೆ ಮತ್ತಷ್ಟು ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದೂ ಇರಾನ್'ಗೆ ಎಚ್ಚರಿಕೆ ನೀಡಿದ್ದರು.
ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ದಾಳಿ ನಡೆಸಿ, ಇರಾನ್‌ನ ಪರಮಾಣು ನೆಲೆಗಳನ್ನು ನಾಶಗೊಳಿಸಿದ್ದೇವೆ. ಅಮೆರಿಕ ಬಿಟ್ಟು ಬೇರೆ ಯಾವ ದೇಶದ ಸೇನೆಯೂ ಇದನ್ನು ಮಾಡಲು ಸಾಧ್ಯವಿಲ್ಲ. ಇರಾನ್ ಶಾಂತಿಯ ಹಾದಿಯಲ್ಲಿ ಸಾಗಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ವಿನಾಶವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು.
Advertisement