
ಟೆಹರಾನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಹೇಳಿಕೆಯನ್ನು ಲೆಕ್ಕಿಸದ ಇರಾನ್, ಇಸ್ರೇಲ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಟೆಲ್ ಅವೀವ್ ಹೊರತುಪಡಿಸಿ, ಬೀರ್ ಶೀವಾ ಮೇಲೆ ಇರಾನ್ ಕ್ಷಿಪಣಿಗಳ ದಾಳಿ ಮಾಡಿದ್ದು, ಪರಿಣಾಮ ಮೂವರು ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಇಸ್ರೇಲ್ ಮತ್ತು ಇರಾನ್ ಮಧ್ಯೆ ತಾತ್ಕಾಲಿಕ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಕೆಲವೇ ನಿಮಿಷಗಳ ನಂತರ ಈ ದಾಳಿ ನಡೆದಿದೆ.
ಇಸ್ರೇಲ್ ಮೇಲೆ ಸೀಮಿತ ಸಂಖ್ಯೆಯ ಕ್ಷಿಪಣಿಗಳೊಂದಿಗೆ ಇರಾನ್ ದಾಳಿ ನಡೆಸಿದ್ದು, ಇಸ್ರೇಲ್ ಪ್ರಸ್ತುತ ಇರಾನಿನ ಕ್ಷಿಪಣಿಗಳನ್ನು ತಡೆಹಿಡಿಯುತ್ತಿದೆ. ಟೆಲ್ ಅವೀವ್‌ನಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮ ಒಪ್ಪಂದಕ್ಕೆ ಬಂದಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ಇದರ ಬೆನ್ನಲ್ಲೇ ಇರಾನ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ.
ಇಂದು ಬೆಳಿಗ್ಗೆ ಸಾಮಾಜಿಕ ಜಾಲತಾಣ ಟ್ರುತ್ ನಲ್ಸಿ ಪೋಸ್ಟ್ ಮಾಡಿದ್ದ ಟ್ರಂಪ್ ಅವರು, ಎಲ್ಲರಿಗೂ ಅಭಿನಂದನೆಗಳು. ಇಸ್ರೇಲ್ ಮತ್ತು ಇರಾನ್ ಸಂಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇಸ್ರೇಲ್ ಮತ್ತು ಇರಾನ್ ತಮ್ಮ ಅಂತಿಮ ಕಾರ್ಯಾಚರಣೆಗಳನ್ನು ಮುಗಿಸಿದ ನಂತರ, ಸುಮಾರು 6 ಗಂಟೆಗಳಲ್ಲಿ ಕದನ ವಿರಾಮ ಪ್ರಾರಂಭವಾಗುತ್ತದೆ. 12 ಗಂಟೆಗಳ ಕಾಲ ಇದು ನಡೆಯುತ್ತದೆ. ನಂತರ ಯುದ್ಧವು ಮುಕ್ತಾಯವಾಗುತ್ತದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು, ಇಸ್ರೇಲ್ ಜೊತೆ ಕದನ ವಿರಾಮಕ್ಕೆ ಒಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇರಾನ್ ಮೇಲೆ ಯುದ್ಧ ಆರಂಭಿಸಿದ್ದು ಇಸ್ರೇಲ್. ಈಗಿನವರೆಗೆ, ಯಾವುದೇ ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಗೆ ಯಾವುದೇ ಒಪ್ಪಂದ ಆಗಿಲ್ಲ. ಇಸ್ರೇಲ್ ತನ್ನ ಕಾನೂನುಬಾಹಿರ ಆಕ್ರಮಣವನ್ನು ನಿಲ್ಲಿಸಿದರೆ, ನಾವು ಯುದ್ಧ ಮುಂದುವರಿಸುವ ಉದ್ದೇಶ ಹೊಂದಿಲ್ಲ. ನಮ್ಮ ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆ ಬಗ್ಗೆ ಅಂತಿಮ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.
Advertisement