
ಮೆಕ್ಸಿಕೋ: ಮೆಕ್ಸಿಕೋ ನಗರದ ಗ್ವಾನಾಜುವಾಟೊ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 12 ಜನರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.
ಇರಾಪುವಾಟೊ ನಗರದಲ್ಲಿ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಆಚರಣೆಯ ವೇಳೆ ಜನರು ಬೀದಿಯಲ್ಲಿ ನೃತ್ಯ ಹಾಗೂ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಬಂದೂಕುಧಾರಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮೋಜು ಮಾಡುತ್ತಿದ್ದ ಜನರು ಇದ್ದಕ್ಕಿದ್ದಂತೆ ಆತಂಕದಲ್ಲಿ ದಾಳಿಯಿಂದ ತಪ್ಪಿಸಿಕೊಳ್ಳಲು, ಓಡಿರುವುದು ಕಂಡು ಬಂದಿದೆ.
ಘಟನೆ ಕುರಿತು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ವಿಷಾದ ವ್ಯಕ್ತಪಡಿಸಿದ್ದು, ಪ್ರಕರಣ ಕುರಿತು ತನಿಖೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ಕೂಡ ಇದೇ ರೀತಿಯ ಘಟನೆ ನಡೆದಿತ್ತು. ಗ್ವಾನಾಜುವಾಟೊದ ಸ್ಯಾನ್ ಬಾರ್ಟೊಲೊ ಡಿ ಬೆರಿಯೊಸ್‌ನಲ್ಲಿ ಕ್ಯಾಥೋಲಿಕ್ ಚರ್ಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ 7 ಜನರು ಸಾವನ್ನಪ್ಪಿದ್ದರು.
ಮೆಕ್ಸಿಕೋ ನಗರದ ವಾಯುವ್ಯದಲ್ಲಿರುವ ಗುವಾಂಜುವಾಟೊದಲ್ಲಿ ನಿಯಂತ್ರಣ ಸಾಧಿಸಲು ವಿವಿಧ ಸಂಘಟಿತ ಅಪರಾಧ ಗುಂಪುಗಳು ಹೋರಾಟ ನಡೆಸುತ್ತಿದ್ದು, ಹೀಗಾಗಿ ಮಿಕ್ಸಿಕೋದ ಅತ್ಯಂತ ಹಿಂಸಾತ್ಮಕ ರಾಜ್ಯಗಳಲ್ಲಿ ಈ ನಗರ ಒಂದಾಗಿದೆ. ವರ್ಷದ ಮೊದಲ ಐದು ತಿಂಗಳಲ್ಲಿ ಈ ನಗರದಲ್ಲಿ ಒಟ್ಟು 1,435 ಹತ್ಯೆಗಳು ನಡೆದಿವೆ.
Advertisement