Lex Fridman ಜೊತೆ ಪಾಡ್ ಕ್ಯಾಸ್ಟ್ ನಲ್ಲಿ ಪ್ರಧಾನಿ ಮೋದಿ ಸಂವಾದ: ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಡೊನಾಲ್ಡ್ ಟ್ರಂಪ್

ಹಿಂದಿನ ಜೊ ಬೈಡನ್ ಸರ್ಕಾರದ ಅವಧಿಯಲ್ಲಿ ಕೂಡ ತಮ್ಮ ಮತ್ತು ಟ್ರಂಪ್ ನಡುವಿನ ನಂಬಿಕೆ ಕಡಿಮೆಯಾಗಿರಲಿಲ್ಲ ಎಂದು ಮೋದಿ ಹೇಳಿದ್ದರು.
PM Narendra Modi and Donald Trump
ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್(ಸಂಗ್ರಹ ಚಿತ್ರ)
Updated on: 

ವಾಷಿಂಗ್ಟನ್: ಅಮೆರಿಕ ಮೂಲದ ಪಾಡ್ ಕಾಸ್ಟರ್ ಮತ್ತು ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್ ಮ್ಯಾನ್ ಜೊತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂವಾದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ವೇದಿಕೆ ಟ್ರುತ್ ಸೋಷಿಯಲ್ ನಲ್ಲಿ ಹಂಚಿಕೊಂಡಿದ್ದಾರೆ.

ಸುಮಾರು ಮೂರು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಪ್ರಧಾನಿ ಮೋದಿಯವರು ತಾವು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಾಗಿ ಮತ್ತು ಉಭಯ ನಾಯಕರು ಪರಸ್ಪರ ಗೌರವ, ಸೌಹಾರ್ದ ಭಾವ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಹಿಂದಿನ ಜೊ ಬೈಡನ್ ಸರ್ಕಾರದ ಅವಧಿಯಲ್ಲಿ ಕೂಡ ತಮ್ಮ ಮತ್ತು ಟ್ರಂಪ್ ನಡುವಿನ ನಂಬಿಕೆ ಕಡಿಮೆಯಾಗಿರಲಿಲ್ಲ ಎಂದು ಹೇಳಿದ್ದರು.

ನಿಮಗೆ ಟ್ರಂಪ್ ಅವರಲ್ಲಿ ಇಷ್ಟವಾಗುವ ಗುಣ ಯಾವುದು ಎಂದು ಪಾಡ್ ಕಾಸ್ಟರ್ ಕೇಳಿದಾಗ, ಅವರು ಮೊದಲ ಅವಧಿಗೆ ಅಮೆರಿಕ ಅಧ್ಯಕ್ಷರಾಗಿದ್ದಾಗ ಹೂಸ್ಟನ್ ನಲ್ಲಿ ಹೌಡಿ ಮೋದಿ ಎಂಬ ಕಾರ್ಯಕ್ರಮ ಮಾಡಿದ್ದರು. ಆಗ ತಮ್ಮ ಭದ್ರತಾ ಶಿಷ್ಟಾಚಾರವನ್ನು ಮರೆತು ನನ್ನ ಜೊತೆ ಸ್ಟೇಡಿಯಂ ಸುತ್ತ ನನ್ನ ಕೈಹಿಡಿದು ಸಾಗಿದರು. ಅವರ ಧೈರ್ಯ ಮತ್ತು ನನ್ನ ಮೇಲೆ ಇಟ್ಟ ನಂಬಿಕೆ, ವಿಶ್ವಾಸ ಕಂಡು ಅಚ್ಚರಿಪಟ್ಟೆ. ಕಳೆದ ವರ್ಷ ಅಧ್ಯಕ್ಷೀಯ ಚುನಾವಣಾ ಪ್ರಚಾರ ಭಾಷಣ ವೇಳೆ ತಮ್ಮ ಮೇಲೆ ಹತ್ಯೆ ಯತ್ನ ನಡೆದಾಗಲೂ ಟ್ರಂಪ್ ಕುಂದಲಿಲ್ಲ. ಧೈರ್ಯದಿಂದಲೇ ಎದುರಿಸಿದ್ದು ನೋಡಿ ಖುಷಿಯಾಯಿತು ಎಂದರು.

PM Narendra Modi and Donald Trump
ಕಾನೂನು, ನಿಯಮ ಪಾಲಿಸದವರೇ ಜಗತ್ತಿನ ದುಸ್ಥಿತಿಗೆ ಕಾರಣ, ಅವರನ್ನು ತಡೆಯುವ ತಾಕತ್ ಇಲ್ಲದ ವಿಶ್ವಸಂಸ್ಥೆ ಈಗ ಅಪ್ರಸ್ತುತ: PM Modi ಕಿಡಿ

ಟ್ರಂಪ್ ಅವರು ಅಮೆರಿಕ ಮೊದಲು ಎಂಬ ತತ್ವದ ಮೇಲೆ ನಂಬಿಕೆಯಿಟ್ಟವರು, ನಾನು ಕೂಡ ದೇಶ ಮೊದಲು, ಭಾರತ ಮೊದಲು ಎಂದು ಹೇಳುವವನು ಎಂದು ಮೋದಿ ಹೇಳಿದರು.

ಉಭಯ ದೇಶಗಳ ಸುಂಕ ಸಮರ ಬಗ್ಗೆ ಮೋದಿ ಪಾಡ್ ಕಾಸ್ಟ್ ನಲ್ಲಿ ಪ್ರಸ್ತಾಪಿಸಲಿಲ್ಲ. ಇತ್ತೀಚೆಗೆ ಟ್ರಂಪ್ ಅವರನ್ನು ಭೇಟಿ ಮಾಡಿದ್ದ ಬಗ್ಗೆ ಮಾತನಾಡಿದ ಮೋದಿ, ಈ ಬಾರಿಯ ಅಧ್ಯಕ್ಷ ಅವಧಿಯಲ್ಲಿ ದೇಶವನ್ನು ಹೇಗೆ ಮುನ್ನಡೆಸಬೇಕು, ತಮ್ಮ ಜೊತೆ ಬಲವಾದ ತಂಡ ಹೇಗೆ ಕಟ್ಟಿಕೊಳ್ಳಬೇಕು ಎಂಬ ಬಗ್ಗೆ ಅವರಿಗೆ ಸರಿಯಾದ ದೃಷ್ಟಿಕೋನವಿದೆ, ಅವರು ಸಿದ್ಧರಾಗಿದ್ದಾರೆ ಎಂದು ನನಗನಿಸುತ್ತದೆ ಎಂದಿದ್ದಾರೆ.

ಪ್ರಧಾನ ಮಂತ್ರಿಯವರು ಮಹಾತ್ಮ ಗಾಂಧಿಯವರ ಪರಂಪರೆಯನ್ನು ಶ್ಲಾಘಿಸಿದರು. ತಮ್ಮನ್ನು ಶಾಂತಿಪ್ರಿಯ ಎಂದು ಬಣ್ಣಿಸಿಕೊಂಡರು, ರಷ್ಯಾ ಮತ್ತು ಉಕ್ರೇನ್ ನಾಯಕರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಡ್‌ಕಾಸ್ಟ್‌ನಲ್ಲಿ, ಮೋದಿ ಹಲವಾರು ವಿದೇಶಾಂಗ ವ್ಯವಹಾರಗಳ ವಿಷಯಗಳ ಬಗ್ಗೆಯೂ ಮಾತನಾಡಿದರು. ಸೋವಿಯತ್ ಒಕ್ಕೂಟದ ಪತನದ ನಂತರ ರಷ್ಯಾದಿಂದ ಅಮೆರಿಕಕ್ಕೆ ತೆರಳಿದ ಫ್ರಿಡ್‌ಮನ್, 2018 ರಲ್ಲಿ ತಮ್ಮ ಪಾಡ್‌ ಕಾಸ್ಟ್ ನ್ನು ಪ್ರಾರಂಭಿಸಿದರು, ಇದನ್ನು ಮೂಲತಃ ಕೃತಕ ಬುದ್ಧಿಮತ್ತೆ ಪಾಡ್‌ಕಾಸ್ಟ್ ಎಂದು ಹೆಸರಿಸಲಾಗಿತ್ತ. 2020 ರಲ್ಲಿ ಲೆಕ್ಸ್ ಫ್ರಿಡ್‌ಮನ್ ಪಾಡ್‌ಕಾಸ್ಟ್ ಎಂದು ಬದಲಿಸಲಾಯಿತು.

ಇವರ ಪಾಡ್ ಕಾಸ್ಟ್ ನಲ್ಲಿ ಇದುವರೆಗೆ ಅತಿಥಿಗಳಾಗಿ ಡೊನಾಲ್ಡ್ ಟ್ರಂಪ್, ವೊಲೊಡಿಮಿರ್ ಝೆಲೆನ್ಸ್ಕಿ, ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್, ಅಮೆರಿಕ ಉದ್ಯಮಿ ಜೆಫ್ ಬೆಜೋಸ್ ಮತ್ತು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಬಂದು ಮಾತನಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com