ಆಟೋ ಮೊಬೈಲ್‌ ಮೇಲೆ ಶೇ.25ರಷ್ಟು ಸುಂಕಕ್ಕೆ ವಿರೋಧ: ಅಮೆರಿಕಾ ಜೊತೆಗಿನ ಸಂಬಂಧ ಮುಗಿದ ಅಧ್ಯಾಯ; ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಅಮೆರಿಕಾದ ಸುಂಕ ವಿಧಿಸುವ ಕ್ರಮವು ಕೆನಡಾದ ಆರ್ಥಿಕತೆಯ ಮೇಲಿನ ನೇರ ದಾಳಿಯಾಗಿದೆ. ಇದು ಕೆನಡಾದ 5 ಲಕ್ಷ ಆಟೋಮೊಬೈಲ್‌ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ.
Canada PM Mark Carney
ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ
Updated on

ಒಟ್ಟಾವಾ: ಅಮೆರಿಕಾಕ್ಕೆ ಆಮದಾಗುವ ಆಟೋ ಮೊಬೈಲ್‌ಗಳ ಮೇಲೆ ಶೇಕಡ 25ರಷ್ಟು ಸುಂಕ ಹಾಕುವ ಕಾರ್ಯಕಾರಿ ಆದೇಶಕ್ಕೆ ಬುಧವಾರ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದು, ಇದನ್ನು ಕೆನಡಾದ ಮೇಲಿನ ನೇರ ದಾಳಿ ಎಂದು ಕೆನಡಾ ಪ್ರಧಾನಿ ಮಾರ್ಕ್‌ ಕಾರ್ನಿ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಅಮೆರಿಕಾದ ಸುಂಕ ವಿಧಿಸುವ ಕ್ರಮವು ಕೆನಡಾದ ಆರ್ಥಿಕತೆಯ ಮೇಲಿನ ನೇರ ದಾಳಿಯಾಗಿದೆ. ಇದು ಕೆನಡಾದ 5 ಲಕ್ಷ ಆಟೋಮೊಬೈಲ್‌ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಭದ್ರತೆ ಮತ್ತು ವ್ಯಾಪಾರ ಸಂಬಂಧಗಳ ಮಾತುಕತೆಗೆ ಮತ್ತೆ ಸಮಯ ಬರುತ್ತದೆ. ನಾವು ನಮ್ಮ ನೌಕರರು, ಕಂಪನಿಗಳ ಪರವಾಗಿ ನಿಲ್ಲುತ್ತೇವೆ, ನಾವು ನಮ್ಮ ದೇಶವನ್ನು ಸಮರ್ಥಿಸಿಕೊಳ್ಳುತ್ತೇವೆಂದು ಹೇಳಿದ್ದಾರೆ.

ಟ್ರಂಪ್‌ ಅವರ ಸುಂಕ ವಿಧಿಸುವ ಕ್ರಮವು ಅನ್ಯಾಯದ ಕ್ರಮ. ಈ ಮೂಲಕ ಟ್ರಂಪ್ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ವ್ಯಾಪಾರ ಒಪ್ಪಂದಗಳನ್ನು ಉಲ್ಲಂಘಿಸುತ್ತಿದ್ದಾರೆ. ಅಮೆರಿಕಾದೊಂದಿಗಿನ ಸಂಬಂಧವನ್ನು ಶಾಶ್ವತವಾಗಿ ಬದಲಾಯಿಸುತ್ತಿದ್ದಾರೆ. ಭವಿಷ್ಯದ ವ್ಯಾಪಾರ ಸಂಬಂಧಗಳನ್ನು ಲೆಕ್ಕಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಮ್ಮ ಆರ್ಥಿಕತೆ, ಸೇನಾ ಸಹಕಾರ ಮತ್ತು ಭದ್ರತೆಯ ಆಧಾರದ ಮೇಲೆ ಅಮೆರಿಕದ ಜೊತೆಗಿನ ಹಳೆಯ ಸಂಬಂಧಗಳನ್ನು ಮುಗಿಸುತ್ತಿದ್ದೇವೆ. ಟ್ರಂಪ್‌ ಸುಂಕದ ವಿರುದ್ಧ ಹೋರಾಡುವುದು ಆರ್ಥಿಕತೆ ರಕ್ಷಿಸುವುದು ನಮ್ಮ ಮುಂದಿನ ಉದ್ದೇಶ. ಪ್ರತೀಕಾರದ ವ್ಯಾಪಾರ ಕ್ರಮಗಳೊಂದಿಗೆ ಹೋರಾಡುತ್ತೇವೆ, ಇದರಿಂದ ಹೆಚ್ಚು ಪರಿಣಾಮ ಬೀರುವುದು ಅಮೆರಿಕದ ಮೇಲೆಯೇ ಎಂದು ತಿಳಿಸಿದ್ದಾರೆ.

Canada PM Mark Carney
ವಿದೇಶಗಳಿಂದ ಆಮದಾಗುವ ಎಲ್ಲಾ ಕಾರುಗಳ ಮೇಲೆ ಶೇ.25 ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಘೋಷಣೆ

ಕಳೆದ ಮಾರ್ಚ್ 14 ರಂದು ಜಸ್ಟಿನ್ ಟ್ರುಡೊ ಬದಲಿಗೆ ಮಾರ್ಕ್ ಕಾರ್ನಿ ಕೆನಡಾದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಸಾಮಾನ್ಯವಾಗಿ, ಹೊಸ ಕೆನಡಾದ ನಾಯಕ ಅಧಿಕಾರ ವಹಿಸಿಕೊಂಡ ತಕ್ಷಣ ಯುಎಸ್ ಅಧ್ಯಕ್ಷರೊಂದಿಗೆ ಫೋನ್ ಕರೆ ಮಾಡುವುದು ಪದ್ಧತಿ. ಆದರೆ ಟ್ರಂಪ್ ಮತ್ತು ಕಾರ್ನಿ ಈವರೆಗೆ ಪರಸ್ಪರ ಮಾತುಕತೆ ನಡೆಸಿಲ್ಲ. ಇದು ಕೆನಡಾ-ಯುಎಸ್ ಸಂಬಂಧದ ಉದ್ವಿಗ್ನತೆಯನ್ನು ಸೂಚಿಸಿದೆ.

ಡೊನಾಲ್ಡ್ ಟ್ರಂಪ್ ಅವರು ಮಾರ್ಕ್ ಕಾರ್ನಿ ಜೊತೆಗೆ ಮಾತನಾಡಲು ಸಿದ್ಧರಿದ್ದರೂ, ಮಾರ್ಕ್ ಕಾರ್ನಿ ಮಾತ್ರ, ಯುಎಸ್ ಅಧ್ಯಕ್ಷರು ಕೆನಡಾಗೆ 'ಗೌರವ' ತೋರಿಸುವವರೆಗೆ, ವಿಶೇಷವಾಗಿ ಅವರ ಪುನರಾವರ್ತಿತ ಸ್ವಾಧೀನ ಬೆದರಿಕೆಗಳನ್ನು ಕೊನೆಗೊಳಿಸದ ಹೊರತು ವಾಷಿಂಗ್ಟನ್‌ನೊಂದಿಗೆ ಗಣನೀಯ ವ್ಯಾಪಾರ ಮಾತುಕತೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ನನಗೆ, ಎರಡು ಷರತ್ತುಗಳಿವೆ, ಒಂದು, ಮೊದಲು ನಮಗೆ ಗೌರವ ಕೊಡಬೇಕು, ಒಂದು ದೇಶವಾಗಿ ನಮ್ಮ ಸಾರ್ವಭೌಮತ್ವಕ್ಕೆ ಗೌರವ ನೀಡಬೇಕು. ಅದು ಪೂರೈಕೆಯಾದರೆ ಮಾತ್ರ ಅಮೆರಿಕಾ ಜೊತೆ ಮಾತನಾಡುತ್ತೇನೆ. ನಮ್ಮ ಆರ್ಥಿಕತೆ ಮತ್ತು ನಮ್ಮ ಭದ್ರತೆಗೆ ಸಂಬಂಧಿಸಿದಂತೆ ನಮ್ಮಿಬ್ಬರ ನಡುವೆ ಸಮಗ್ರ ಚರ್ಚೆ ನಡೆಯಬೇಕು ಎಂದು ಕಾರ್ನಿ ಹೇಳಿದ್ದಾರೆ.

ಓವಲ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಟ್ರಂಪ್‌, ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಎಲ್ಲಾ ಕಾರು, ವಾಹನಗಳ ಮೇಲೆ 25% ಸುಂಕ ವಿಧಿಸಲಾಗುತ್ತದೆ. ಅಮೆರಿಕದಲ್ಲೇ ತಯಾರು ಮಾಡಿದರೆ, ಅದಕ್ಕೆ ಯಾವುದೇ ಸುಂಕ ವಿಧಿಸುವುದಿಲ್ಲ. ಏಪ್ರಿಲ್‌ 2ರಿಂದ ಸುಂಕ ನೀತಿ ಜಾರಿಯಾಗಲಿದ್ದು, ಏಪ್ರಿಲ್‌ 3ರಿಂದ ಸಂಗ್ರಹ ಪ್ರಾರಂಭವಾಗಲಿದೆ. ಅಮೆರಿಕದ ಈ ನೀತಿಯು ದೇಶಿಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com