Myanmar Earthquake: 1,644ಕ್ಕೇರಿದ ಸಾವಿನ ಸಂಖ್ಯೆ; ಭಾರತದಿಂದ 'ಆಪರೇಷನ್ ಬ್ರಹ್ಮ' ಶುರು, ಮ್ಯಾನ್ಮಾರ್‌ಗೆ 2 ನೌಕಾ ಹಡಗು ರವಾನೆ! ಏರ್ ಲಿಫ್ಟ್!
ನವದೆಹಲಿ: ಭೂಕಂಪನದಿಂದ ತತ್ತರಿಸಿರುವ ಮ್ಯಾನ್ಮಾರ್ ನಲ್ಲಿ ಮೃತರ ಸಂಖ್ಯೆ 1,644ಕ್ಕೇರಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಭಾರತ ಶನಿವಾರ ಸಂಜೆ ಆಪರೇಷನ್ ಬ್ರಹ್ಮದಡಿ ಎರಡು ನೌಕಾ ಹಡಗುಗಳನ್ನು ಕಳುಹಿಸಿದೆ. ಏರ್ ಲಿಫ್ಟ್ ಮಾಡಲು ಫೀಲ್ಡ್ ಆಸ್ಪತ್ರೆ ವ್ಯವಸ್ಥೆ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಹದಿನೈದು ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತು ಭಾರತದ ವಾಯುಪಡೆಯ ಸಿ-130 ಜೆ ವಿಮಾನವು ಮ್ಯಾನ್ಮಾರ್‌ನ ಯಾಂಗಾನ್ ನಗರವನ್ನು ತಲುಪಿದೆ. ಟೆಂಟ್‌ಗಳು, ಬ್ಲಾಂಕೆಟ್‌ಗಳು, ಸ್ಲೀಪಿಂಗ್ ಬ್ಯಾಗ್‌ಗಳು, ಫುಡ್ ಪ್ಯಾಕೆಟ್‌ಗಳು, ಹೈಜೀನ್ ಕಿಟ್‌ಗಳು, ಜೆನೆರೇಟರ್‌ಗಳು ಹಾಗೂ ಅತ್ಯಗತ್ಯ ಔಷಧಿಗಳನ್ನು ಕಳುಹಿಸಲಾಗಿದೆ. ಈಗಾಗಲೇ ಹದಿನೈದು ಟನ್ ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್‌ಗೆ ತಲುಪಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದೆ.
118 ಸದಸ್ಯರ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯ ಘಟಕ ಆಗ್ರಾದಿಂದ ಮಾಂಡಲೆಗೆ ತೆರಳುತ್ತಿದೆ. ಮ್ಯಾನ್ಮಾರ್ ಜನರಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ತಂಡವು ಸಹಾಯ ಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥ ಮಿನ್ ಆಂಗ್ ಹ್ಲೇಂಗ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಅಲ್ಲಿ ಸಂಭವಿಸಿರುವ ಭಾರಿ ಭೂಕಂಪದಿಂದ ಉಂಟಾದ ವಿನಾಶವನ್ನು ಎದುರಿಸಲು ಭಾರತ ನಿಮ್ಮೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಮ್ಯಾನ್ಮಾರ್‌ನ ಹಿರಿಯ ಜನರಲ್ ಎಚ್‌ಇ ಮಿನ್ ಆಂಗ್ ಹ್ಲೈಂಗ್ ಅವರೊಂದಿಗೆ ಮಾತನಾಡಿದ್ದೇನೆ. ವಿನಾಶಕಾರಿ ಭೂಕಂಪದಿಂದಾದ ಜೀವಹಾನಿಗೆ ಸಂತಾಪ ಸೂಚಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ನೆರೆಯ ಮ್ಯಾನ್ಮಾರ್ ಜನರೊಂದಿಗೆ ಭಾರತ ಒಗ್ಗಟ್ಟಿನಿಂದ ನಿಂತಿದೆ" ಎಂದು ಹೇಳಿದ್ದಾರೆ.
‘ಆಪರೇಷನ್ ಬ್ರಹ್ಮ’ದ ಭಾಗವಾಗಿ ಭಾರತವು ವಿಪತ್ತು ಪರಿಹಾರ ಸಾಮಗ್ರಿಗಳು, ಮಾನವೀಯ ನೆರವು, ಶೋಧ ಮತ್ತು ರಕ್ಷಣಾ ತಂಡಗಳನ್ನು ವಿಪತ್ತು ಪೀಡಿತ ಪ್ರದೇಶಗಳಿಗೆ ಕಳುಹಿಸುತ್ತಿದೆ ಎಂದು ಮೋದಿ ಹೇಳಿದರು.
ಭಾರತದ ವಾಯುಪಡೆಯ ವಿಮಾನದಲ್ಲಿ ಪರಿಹಾರ ಸಾಮಗ್ರಿಗಳ ಜೊತೆಗೆ ಶೋಧ ಕಾರ್ಯಾಚರಣೆ ಹಾಗೂ ರಕ್ಷಣೆಗಾಗಿ ತಂಡಗಳನ್ನು ಕಳುಹಿಸಲಾಗಿದೆ. ಅದರಲ್ಲಿ ವೈದ್ಯಕೀಯ ತಂಡವೂ ಇದೆ. ದೆಹಲಿ ಸಮೀಪದ ಗಾಜಿಯಾಬಾದ್ ಮೂಲದ 8ನೇ ಎನ್‌ಡಿಆರ್‌ಎಫ್ ಬೆಟಾಲಿಯನ್‌ನ ಕಮಾಂಡೆಂಟ್ ಪಿಕೆ ತಿವಾರಿ ಅವರು ಶೋಧ ಕಾರ್ಯಾಚರಣೆಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ತಂಡದಲ್ಲಿ ಶ್ವಾನಗಳು ಇರಲಿವೆ ಎಂದು NDRF ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಕಾರ್ಯಾಚರಣೆ) ಮೊಹ್ಸೆನ್ ಶಾಹೇದಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ