
ಇಸ್ಲಾಮಾಬಾದ್: ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಿಂದ ಯಾವುದೇ ಹಾನಿಯೂ ಆಗಿಲ್ಲ ಎಂದು ನಿರಾಕರಿಸುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ಕೊನೆಗೂ ಸತ್ಯ ಬಾಯ್ಬಿಟ್ಟಿದೆ. ಮೇ 10 ರಂದು ಭಾರತದ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಸ್ಥಳಗಳನ್ನು ನಾಶಪಡಿಸಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ,
ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ಮಾಡಿ ಈ ಮಾಹಿತಿ ನೀಡಿದ್ದಾಗಿ ಷರೀಫ್ ಬಹಿರಂಗಪಡಿಸಿದ್ದಾರೆ.
ಇದುವರೆಗೂ ಭಾರತದ ಮಿಲಿಟರಿ ಕಾರ್ಯಾಚರಣೆಯನ್ನು ಪಾಕಿಸ್ತಾನ ನಿರಾಕರಿಸುತ್ತಾ ಬಂದಿತ್ತು. ಪಾಕ್ ಪ್ರಧಾನಿ ಈ ಹೇಳಿಕೆ ನೀಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಸ್ಲಾಮಾಬಾದ್ ಪಾಕಿಸ್ತಾನ ಸ್ಮಾರಕದಲ್ಲಿ ನಡೆದ ವಿಶೇಷ "ಯೂಮ್-ಇ-ತಷ್ಕರ್' ಸಮಾರಂಭದಲ್ಲಿ ಷರೀಫ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಮೇ 9-10ರ ಮಧ್ಯರಾತ್ರಿ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಕರೆ ಮಾಡಿ, ಹಿಂದೂಸ್ತಾನಿ ಸಿಡಿತಲೆ ಕ್ಷಿಪಣಿ ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳಿಗೆ ಅಪ್ಪಳಿಸಿದೆ ಎಂದು ಮಾಹಿತಿ ನಿಡಿದರು. ಆದರೆ, ಜನರಲ್ ಅವರ ಧ್ವನಿಯಲ್ಲಿ ವಿಶ್ವಾಸ, ಆತ್ಮವಿಶ್ವಾಸ ಮತ್ತು ರಾಷ್ಟ್ರಪ್ರೇಮ ಇತ್ತು ಎನ್ನುವುದನ್ನು ನಾನು ದೇವರ ಮೇಲೆ ಪ್ರಮಾಣ ಮಾಡಿ ಹೇಳಬಲ್ಲೆ ಎಂದಿದ್ದಾರೆ.
ನಮ್ಮ ವಾಯುಪಡೆ ನಮ್ಮ ದೇಶವನ್ನು ರಕ್ಷಿಸಿಕೊಳ್ಳಲು ದೇಶಿ ತಂತ್ರಜ್ಞಾನವನ್ನು ಬಳಸಿದೆ, ಆದರೆ, ಅವರು ಅತ್ಯಾಧುನಿಕ ಸಾಧನ ಸಲಕರಣೆಗಳು ಮತ್ತು ತಂತ್ರಜ್ಞಾನವನ್ನು ಚೀನಿ ಜೆಟ್ ಗಳ ಮೇಲೆ ಬಳಸಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಉಗ್ರರು ನೇಪಾಳಿ ಪ್ರಜೆ ಸೇರಿದಂತೆ 26 ನಾಗರಿಕರ ಬಲಿ ಪಡೆದಿದ್ದರು. ಈ ದಾಳಿಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಇದರ ಬೆನ್ನಲ್ಲೇ ಪಾಕಿಸ್ತಾನವು ಮೇ 8, 9 ಮತ್ತು 10 ರಂದು ಹಲವಾರು ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು.
ಇದಕ್ಕೆ ತಿರುಗೇಟು ಎಂಬಂತೆ ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿಯದ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ಮೇಲೆ ಭೀಕರ ಪ್ರತಿದಾಳಿ ನಡೆಸಿತ್ತು.
ಬಳಿಕ ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಡಿಜಿಎಂಒ ಮಟ್ಟದ ಮಾತುಕತೆಯಲ್ಲಿ ಯುದ್ಧವನ್ನು ಕೊನೆಗೊಳಿಸಲು ಒಪ್ಪಿಕೊಂಡಿದ್ದವು. ಈಗ ಎರಡೂ ದೇಶಗಳು ವಿಶ್ವಾಸ ವೃದ್ಧಿ ಕ್ರಮಗಳನ್ನು ಮುಂದುವರಿಸಲು ನಿರ್ಧರಿಸಿವೆ.
Advertisement