
ದುಬೈ: 26 ಮಂದಿಯ ಸಾವಿಗೆ ಕಾರಣವಾಗಿದ್ದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ವೇಳೆ ಭಾರತದ ವಿರುದ್ಧ ಕೆಂಡಕಾರಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi)ಯನ್ನು ದುಬೈನಲ್ಲಿರುವ ಕೇರಳ ಕಮ್ಯುನಿಟಿ ತಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು.. ಈ ಹಿಂದೆ ಆಪರೇಷನ್ ಸಿಂಧೂರ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸೇನಾ ಸಂಘರ್ಷದ ವೇಳೆ ಭಾರತೀಯ ಸೇನೆಯನ್ನು ನಾಲಾಯಕ್ ಸೇನೆ ಎಂದು ಕರೆದಿದ್ದ ಶಾಹಿದ್ ಆಫ್ರಿದಿ ಭಾರತದ ವಿರುದ್ಧ ತೀವ್ರ ಕಿಡಿಕಾರಿದ್ದರು.
ಭಾರತದ ಆರೋಪಗಳಿಗೆ ಸಂಬಂಧಿಸಿದಂತೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಶಾಹಿದ್ ಅಫ್ರಿದಿ ಭಾರತದ ವಿರುದ್ಧ ದ್ವೇಷಪೂರ್ಣ ನಿಲುವು ತಳೆದು ಅತ್ಯಂತ ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಭಾರತದ ಸೈನಿಕರನ್ನು ಅಸಮರ್ಥರು ಎಂದು ಅವರು ಕರೆದಿದ್ದರು.
ನಿಮ್ಮ 8 ಲಕ್ಷ ಸೈನಿಕರು ಅಲ್ಲಿ ಕಾಶ್ಮೀರದಲ್ಲಿ ಇದ್ದರೂ ಅಲ್ಲಿ ಉಗ್ರ ದಾಳಿ ಸಂಭವಿಸಿದೆ ಎಂದರೆ ನೀವು ಎಷ್ಟರಮಟ್ಟಿಗೆ ಅಸಮರ್ಥರು ಎಂದು ನೀವೇ ಊಹಿಸಿಕೊಳ್ಳಿ.. ಸೈನಿಕರು ಇದ್ದರೂ ಪಹಲ್ಗಾಮ್ ನಲ್ಲಿ ದಾಳಿಯಾಗಿದೆ ಎಂದರೆ ಜನರಿಗೆ ಸಾಕಷ್ಟು ಭದ್ರತೆಯನ್ನು ನೀಡುವಷ್ಟು ನಿಮ್ಮ ಸೇನೆಯು ಅಸಮರ್ಥವಾಗಿದೆ. ನಿಮ್ಮ ಸೇನೆ ಅಷ್ಟು ನಾಲಾಯಕ್ ಎಂದು ಕಿಡಿಕಾರಿದ್ದರು.
ಭಾರತೀಯ ಸೇನೆಯ ನಾಲಾಯಕ್ ಎಂದಿದ್ದವನಿಗೆ ಕೇರಳಿಗರಿಂದ ಆತ್ಮೀಯ ಸ್ವಾಗತ
ಇನ್ನು ಭಾರತೀಯ ಸೇನೆಯನ್ನು ನಾಲಾಯಕ್ ಎಂದು ಕರೆದಿದ್ದ ಶಾಹಿದ್ ಅಫ್ರಿದಿಯನ್ನು ದುಬೈನಲ್ಲಿ ಕೇರಳ ಸಮುದಾಯದ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಲ್ಲದೇ ಆತ್ಮೀಯ ಸ್ವಾಗತ ಕೋರಲಾಗಿದೆ. ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕೇರಳದ ಸಮುದಾಯ ಅತ್ಯಂತ ವೈಭವದಿಂದ ಸ್ವಾಗತಿಸಿದೆ.
ಈ ವೇಳೆ ಮಾತನಾಡಿದ ಅಫ್ರಿದಿ, ತಮ್ಮನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಕ್ಕೆ ಧನ್ಯವಾದ ಹೇಳಿದರು. ಅಲ್ಲದೆ ಕೇರಳ ಆಹಾರವನ್ನು ನಾನು ಪ್ರೀತಿಸುತ್ತೇನೆ. ತುಂಬಾ ಸ್ವಾದಿಷ್ಟವಾಗಿರುತ್ತದೆ ಎಂದು ಹೇಳಿದರು.
ವ್ಯಾಪಕ ಆಕ್ರೋಶ
ಇನ್ನು ದುಬೈನಲ್ಲಿರುವ ಕೇರಳ ಸಮುದಾಯದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ದೇಶಭಕ್ತಿ ಅನ್ನೋದು ಸ್ಟೇಡಿಯಂನ ಹೊರಗೆ ಹೋಗಿದೆ.ಎಂತಹ ನಾಚಿಕೆಗೇಡಿನ ಸಂಗತಿ. ಅವರಿಂದ ಇನ್ನೂ ಉತ್ತಮವಾದದ್ದನ್ನು ನಿರೀಕ್ಷೆ ಮಾಡಿದ್ದೆವು ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇದು ನಾಚಿಕೆಗೇಡು, ಬಹುಶಃ ಇವರು ಕಾಂಗ್ರೆಸ್ ಬೆಂಬಲಿಗರಾಗಿರಬಹುದು ಎಂದಿದ್ದಾರೆ.
'ನೀವು ನಿಮ್ಮ ದೇಶಕ್ಕೆ ಎಷ್ಟರ ಮಟ್ಟಿಗೆ ನಿಷ್ಠೆಯಿಲ್ಲದವರಾಗಿರಬಹುದು... ಹೆಚ್ಚು ಸಾಕ್ಷರರಾದ ಜನರಿಂದ ಇದನ್ನ ಕಲಿಯಬೇಕಾ?... ನಾಚಿಕೆಗೇಡು!', '@NIA_India ಅಲ್ಲಿದ್ದ ಪ್ರತಿಯೊಬ್ಬರನ್ನೂ ತನಿಖೆ ಮಾಡಬೇಕು ಮತ್ತು GOI ಅವರ ಪೌರತ್ವವನ್ನು ರದ್ದುಗೊಳಿಸಬೇಕು..' ಎಂದು ಆಗ್ರಹಿಸಿದ್ದಾರೆ.
'ಅಲ್ಲಿನವರು ಭಾರತ ಮೂಲದವರು ಯಾರೂ ಇಲ್ಲವೇ!! ಈ ರೀತಿ ಆಗುವುದನ್ನು ನೋಡಿ ನಾಚಿಕೆಯಾಗುತ್ತಿದೆ!!' 'ನಿಮಗೆ ನಾಚಿಕೆಯಾಗುತ್ತಿಲ್ಲವೇ ಮಲ್ಲುಗಳೇ!!', 'ಈ ಕೇರಳಿಗರು ತಮ್ಮ ತಾಯ್ನಾಡಿಗೆ ದ್ರೋಹಿಗಳು, ಅವರು ಎಚ್ಚರಗೊಂಡ ಮಾಧ್ಯಮಗಳಿಂದ ದೃಢೀಕರಣ ಪಡೆಯಲು ತಮ್ಮ ತಂದೆ ಮತ್ತು ತಾಯಂದಿರನ್ನು ಮಾರುತ್ತಾರೆ, ನಾಚಿಕೆಗೇಡಿನ ಮತ್ತು ಕರುಣಾಜನಕ', 'ಕೇರಳಿಗರು ಪಾಕಿಸ್ತಾನಕ್ಕೆ ಸಹೋದರರು. ಅವರಿಗೆ 1947 ರ ರೈಲು ಹತ್ತಲು ಸಾಧ್ಯವಾಗಲಿಲ್ಲ' ಎಂದು ಕಾಮೆಂಟ್‌ಗಳು ಬಂದಿವೆ.
ಅಂದಹಾಗೆ ಪಹಲ್ಗಾಮ್ ಘಟನೆಯ ನಂತರ, ಶಾಹಿದ್ ಅಫ್ರಿದಿ ಸೇರಿದಂತೆ ಪಾಕಿಸ್ತಾನಿ ಕ್ರಿಕೆಟಿಗರು ಮತ್ತು ಕೆಲವು ಸುದ್ದಿ ವಾಹಿನಿಗಳಂತೆ, ಅವರ ಯುಟ್ಯೂಬ್ ಮತ್ತು ಎಕ್ಸ್ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
Advertisement