

ಬೀಜಿಂಗ್: ಚೀನಾದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಯಾದ ಬೃಹತ್ ಸೇತುವೆ ಕುಸಿತವಾಗಿದೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಹಾಂಗ್ಕಿ ಸೇತುವೆ ಕುಸಿದು ಬಿದ್ದಿದ್ದು, ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸ್ಥಳೀಯ ಅಧಿಕಾರಿಗಳ ಪ್ರಕಾರ, ಚೀನಾದ ಹೃದಯಭಾಗವನ್ನು ಟಿಬೆಟ್‌ನೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವ ಸೇತುವೆಯು ಮಂಗಳವಾರ ಮಧ್ಯಾಹ್ನ ಸರಣಿ ಭೂಕುಸಿತ ಸಂಭವಿಸಿದೆ. ಆದಾಗ್ಯೂ, ಘಟನೆಯಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಮೇರ್ಕಾಂಗ್ ನಗರದ ಶುವಾಂಗ್‌ಜಿಯಾಂಗ್‌ಕೌ ಜಲವಿದ್ಯುತ್ ಕೇಂದ್ರದ ಬಳಿ ಈ ಘಟನೆ ಸಂಭವಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊದಲ್ಲಿ ಬೆಟ್ಟದ ಇಳಿಜಾರು ದಿಢೀರ್ ಕುಸಿಯಲು ಪ್ರಾರಂಭಿಸಿದೆ.
ಈ ವೇಳೆ ಧೂಳು ಮತ್ತು ಶಿಲಾಖಂಡರಾಶಿಗಳು ಬೀಳುತ್ತಿರುವುದು ದಾಖಲಾಗಿದೆ. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಹಾಂಗ್ಕಿ ಸೇತುವೆ ಮೇಲೆ ಶಿಲಾಖಂಡಗಳ ರಾಶಿ ಬಿದ್ದಿವೆ. ಇದರಿಂದಾಗಿ ಸೇತುವೆಯ ಕಂಬಗಳು ನೋಡ ನೋಡುತ್ತಲೇ ಕುಸಿಯುತ್ತಾ ಸಾಗಿವೆ. ಬಳಿಕ ಸೇತುವೆ ನದಿಗೆ ಬಿದ್ದಿದೆ.
ಭೂಕುಸಿತದ ತೀವ್ರತೆಗೆ ರಸ್ತೆಗಳೂ ಕೂಡ ಬಿರುಕು ಬಿಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಭಾವ್ಯ ಅಪಾಯವನ್ನು ಸೂಚಿಸುವ ಭೂಪ್ರದೇಶ ಬದಲಾಗುತ್ತಿರುವ ಚಿಹ್ನೆಗಳನ್ನು ಪತ್ತೆ ಹಚ್ಚಿದ ನಂತರ 758 ಮೀಟರ್ ಉದ್ದದ ಸೇತುವೆಯನ್ನು ಎಲ್ಲಾ ಸಂಚಾರಕ್ಕೆ ಮುಚ್ಚಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಕಡಿದಾದ ಪರ್ವತ ಇಳಿಜಾರುಗಳಲ್ಲಿ ಭೂವೈಜ್ಞಾನಿಕ ಅಸ್ಥಿರತೆ ಮತ್ತು ಭೂಕುಸಿತಗಳು ಕುಸಿತಕ್ಕೆ ಕಾರಣವಾಗಿವೆ. ಹಾನಿಯನ್ನು ನಿರ್ಣಯಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತುರ್ತು ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಕೆಲ ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಸೇತುವೆ
ಇನ್ನು ಸಿಚುವಾನ್ ರಸ್ತೆ ಸಂಪರ್ಕಿಸುವ ಈ ಹಾಂಗ್ಕಿ ಸೇತುವೆಯನ್ನು ಈ ವರ್ಷದ ಆರಂಭದಲ್ಲಿ ಪೂರ್ಣಗೊಳಿಸಲಾಗಿತ್ತು ಮತ್ತು ಇತ್ತೀಚೆಗಷ್ಟೇ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.
Advertisement