

ಹಾಂಗ್ ಕಾಂಗ್: ಹಾಂಗ್ ಕಾಂಗ್ ನಲ್ಲಿ ಸಂಭವಿಸಿದ್ದ 55 ಮಂದಿಯ ಸಾವಿಗೆ ಕಾರಣವಾದ 32 ಅಂತಸ್ತಿನ ವಸತಿ ಸಮುಚ್ಛಯದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಒಂದೇ ಒಂದು ಸಿಗರೇಟ್ ಕಾರಣ ಎಂಬ ವಿಲಕ್ಷಣ ವಾದವೊಂದು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ಬುಧವಾರ ಮಧ್ಯಾಹ್ನ ಹಾಂಗ್ ಕಾಂಗ್‌ನಲ್ಲಿ (Hong Kong Fire Accident) 8 ಅಪಾರ್ಟ್ಮೆಂಟ್ ಕಟ್ಟಡಗಳಿರುವ ಕಾಂಪ್ಲೆಕ್ಸ್ಗೆ ಬೆಂಕಿ ಬಿದ್ದಿದೆ. ಈ ಅಪಾರ್ಟ್ಮೆಂಟ್ಗಳಲ್ಲಿ ಸುಮಾರು 2 ಸಾವಿರ ಮನೆಗಳಿದ್ದು, 4,600ಕ್ಕೂ ಹೆಚ್ಚು ಜನರು ವಾಸವಾಗಿದ್ದರು.
ಈ ಬೆಂಕಿ ಅವಘಡದಲ್ಲಿ ಒಂದೆರಡು ಕಟ್ಟಡಗಳು ಪೂರ್ತಿ ಸುಟ್ಟು ಕರಕಲಾಗಿವೆ. ಇವುಗಳೆಲ್ಲವೂ 20 ಮಹಡಿಗಿಂತಲೂ ಎತ್ತರದ ಅಪಾರ್ಟ್ಮೆಂಟ್ಗಳಾಗಿವೆ. ಈ ಬೆಂಕಿ ಅವಘಡದಲ್ಲಿ ಇದುವರೆಗೆ 55 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.
ಕಳೆದ 6 ದಶಕಗಳಲ್ಲಿ ಹಾಂಗ್ಕಾಂಗ್ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ದುರಂತ ಇದಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ, ಸುಮಾರು 300 ಜನರು ಇನ್ನೂ ಪತ್ತೆಯಾಗಲಿಲ್ಲ. 4,800 ನಿವಾಸಿಗಳಲ್ಲಿ ಸುಮಾರು 900 ಜನರನ್ನು ರಾತ್ರಿಯಿಡೀ ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ದುರಂತಕ್ಕೆ ಸಿಗರೇಟ್ ಕಾರಣ?
ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೈರಲ್ ವೀಡಿಯೊ ಅನ್ವಯ ದುರಂತಕ್ಕೂ ಕೆಲ ಸಮಯ ಮುನ್ನ ಇದೇ ಅಪಾರ್ಟ್ ಮೆಂಟ್ ಗಳಲ್ಲಿ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕನೋರ್ವ ಸಿಗರೇಟ್ ಸೇದುತ್ತಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಇದು ದುರಂತದ ತನಿಖೆಗೆ ಹೊಸ ತಿರುವು ನೀಡಿದೆ. ಅಗ್ನಿ ಅವಘಡಕ್ಕೆ ಸಿಗರೇಟ್ ಕಾರಣ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಸಾಕಷ್ಟು ಎಕ್ಸ್ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, 'ಇಡೀ ಕಟ್ಟಡವು ಬೆಂಕಿಗೆ ಆಹುತಿಯಾಗುವ ಕೆಲವೇ ಕ್ಷಣಗಳ ಮೊದಲು, ಹಾಂಗ್ ಕಾಂಗ್‌ನ ತೈ ಪೊದಲ್ಲಿರುವ ವಾಂಗ್ ಫುಕ್ ಕೋರ್ಟ್‌ನ ಹೊರ ಗೋಡೆಯನ್ನು ದುರಸ್ತಿ ಮಾಡುವಾಗ ಕಾರ್ಮಿಕರು ಆಕಸ್ಮಿಕವಾಗಿ ಧೂಮಪಾನ ಮಾಡುತ್ತಿದ್ದರು ಎಂದು ಆಘಾತಕಾರಿ ಹೊಸ ದೃಶ್ಯಗಳು ಬಹಿರಂಗಪಡಿಸುತ್ತವೆ' ಎಂದು ಹೇಳಿದ್ದಾರೆ.
ಮೂವರ ಬಂಧನ
ಆದಾಗ್ಯೂ, ಅಧಿಕಾರಿಗಳು ಅಂತಹ ಯಾವುದೇ ಸಂಬಂಧವನ್ನು ದೃಢಪಡಿಸಿಲ್ಲ ಮತ್ತು ಬೆಂಕಿಯ ಅಧಿಕೃತ ಕಾರಣವನ್ನು ಇನ್ನೂ ಪ್ರಕಟಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಬಂಧಿತರನ್ನು ನಿರ್ಮಾಣ ಕಂಪನಿಯ ನಿರ್ದೇಶಕರು ಮತ್ತು ಎಂಜಿನಿಯರಿಂಗ್ ಸಲಹೆಗಾರರು ಎಂದು ಗುರುತಿಸಲಾಗಿದೆ. ಪೊಲೀಸರು ಸಂಸ್ಥೆಯ ಹೆಸರನ್ನು ಹೇಳಲಿಲ್ಲ, ಆದರೆ ಅಧಿಕಾರಿಗಳು ಪ್ರೆಸ್ಟೀಜ್ ಕನ್ಸ್ಟ್ರಕ್ಷನ್ & ಎಂಜಿನಿಯರಿಂಗ್ ಕಂಪನಿಯ ಕಚೇರಿಯನ್ನು ಶೋಧಿಸಿದ್ದಾರೆ.
ಮುಂದುವರೆದ ಬೆಂಕಿ ನಂದಿಸುವ ಕಾರ್ಯಾಚರಣೆ
ಅಗ್ನಿಶಾಮಕ ಕಾರ್ಯಾಚರಣೆಗಳು ಗುರುವಾರವೂ ಮುಂದುವರೆದವು. ಏಕೆಂದರೆ ಸಿಬ್ಬಂದಿ ಹಲವಾರು ಅಪಾರ್ಟ್ ಮೆಂಟ್ ಒಳಗೆ ಇನ್ನೂ ಉರಿಯುತ್ತಿರುವ ಬೆಂಕಿಯನ್ನು ಹೋರಾಡುತ್ತಿದ್ದಾರೆ ಎಂದು ಎಪಿ ವರದಿ ತಿಳಿಸಿದೆ.
ಕಟ್ಟಡದ 32 ಅಂತಸ್ತಿನ ಎಂಟು ಕಟ್ಟಡಗಳಲ್ಲಿ ಏಳು ಕಟ್ಟಡಗಳು ನಿರ್ಮಾಣ ಸಾಮಗ್ರಿಗಳು ಮತ್ತು ಬಿದಿರಿನ ಸ್ಕ್ಯಾಫೋಲ್ಡಿಂಗ್‌ಗೆ ಬೆಂಕಿ ತಗುಲಿ ಸುಟ್ಟುಹೋದವು. ತೀವ್ರ ಶಾಖವು ರಕ್ಷಣಾ ಕಾರ್ಯಗಳಿಗೆ ತೀವ್ರ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1996 ರಲ್ಲಿ ಕೌಲೂನ್‌ನಲ್ಲಿ ವಾಣಿಜ್ಯ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ 41 ಜನರು ಸಾವನ್ನಪ್ಪಿದ ನಂತರ ಹಾಂಗ್ ಕಾಂಗ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ಇದಾಗಿದೆ.
Advertisement